ಗುರುವಾರ, ಜನವರಿ 13, 2011

ಅದೃಷ್ಟದ ಹುಡುಗ

(ಸುದ್ದಿಬಿಡುಗಡೆ ವಾರಪತ್ರಿಕೆ ದೀಪಾವಳಿ ವಿಶೇಷಾಂಕ 2008ರ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ ಕಥೆ)

ಅದು ಉದ್ದನೆಯ ಬೈತಲೆಯಂತೆ ಚಾಚಿದ ದಾರಿ.ಇಕ್ಕೆಲಗಳಲ್ಲಿ ಒಂದಷ್ಟು ಮನೆಗಳು.ಸುಮಾರು ಇನ್ನೂರೈವತ್ತು ಮನೆಗಳಿರುವ ಪುಟ್ಟ ಹಳ್ಳಿಯದು.ಆ ದಾರಿಯ ಕೊನೆಗೆ ಒಳಗೆ ಹಾದು ಹೋದರೆ ಸಿಗುವುದು ನೀಲಕ್ಕನ ಮನೆ, ಊರ ಹೊರಗೆ ಕತ್ತಲಾಯಿತೆಂದರೆ ಸಾಕು ನೀಲಕ್ಕನ ಮನೆಯೊಳಗೆ ಚಿಮಿಣಿ ದೀಪದ ಬೆಳಕು ಕಾಣುತ್ತಿತ್ತು.ಆ ಊರಿಗೆ ಇನ್ನೂ ವಿದ್ಯುತ್ತಿನ ಸ್ಪರ್ಶವಾಗಿಲ್ಲವೆಂದಲ್ಲ.ಅದು ಇದ್ದರೂ ಮುಖ್ಯ ರಸ್ತೆಯವರೆಗೆ ಮಾತ್ರ.ಇವಳ ಮನೆಯೋ ಊರಿನಿಂದ ದೂರ,ಗದ್ದೆ ತೋಟ ಗುಡ್ಡ ತೋಡು ಇಳಿದು ಹೊಗುವುದೆಂದರೇನೇ ಪ್ರಯಾಸದ ಸಂಗತಿ.ಪತಿ ನಾರ್ಣಪ್ಪ ಸಾಯುವ ಮೊದಲು ಮಾಡಿಟ್ಟಿದ್ದು ಅದೊಂದೇ ಈ ಮುರುಕು ಮನೆ!ತನ್ನ ಪಾಲಿನ ಇಬ್ಬರು ಮಕ್ಕಳನ್ನು ನೀಲಕ್ಕ ತನ್ನೆರಡು ಕಣ್ಣುಗಳೆಂಬಂತೆ ಮುದ್ದಿನಿಂದ ಸಾಕಿದ್ದಳು.ಹುಟ್ಟಿನೊಂದಿಗೆ ಬಡತನ ಅಂಟಿಸಿಕೊಂಡು ಬಂದಿದ್ದರೂ ನೀಲಕ್ಕ ಮಕ್ಕಳ ಪ್ರೀತಿಗೇನೂ ಕಡಿಮೆ ಮಾಡಿರಲಿಲ್ಲ.ಮಗ ಮನುವನ್ನಾದರೂ ಚೆನ್ನಾಗಿ ಓದಿಸಿ ಒಂದು ದಾರಿಗೆ ತರಬೇಕೆಂದುಕೊಂಡರೂ ಈ ಬಡತನದೊಂದಿಗಿನ ಹೋರಾಟದಲ್ಲಿ ಅವಳು ಸೋತು ಹೋಗಿದ್ದಳು.ಆದರೂ ಮಗನ ಮೇಲೆ ತುಂಬು ಭರವಸೆಯಿಟ್ಟಿದ್ದಳು,ತನ್ನ ಬಾಳಿಗೆ ಒಂದಲ್ಲ ಒಂದು ದಿನ ಬೆಳಕಾಗುತ್ತಾನೆ ಎಂಬ ಆಶಾಭಾವ ಹೊತ್ತು ಕುಳಿತಿದ್ದಳು.ಅರ್ಧದಲ್ಲಿ ಶಾಲೆಗೆ ಪೂರ್ಣವಿರಾಮವಿಟ್ಟು ಕೈಚೆಲ್ಲಿ ಕುಳಿತದ್ದ ಮನು. ಮನೆಯಲ್ಲಿನ ಕಿತ್ತು ತಿನ್ನುವ ಬಡತನದಿಂದ ಬೇಸತ್ತು,ಅಮ್ಮನ ತೊಳಲಾಟ,ತಂಗಿಯ ಭವಿಷ್ಯ ಕಣ್ಣೆದುರು ಬಂದಂತಾಗಿ ಪರಿಚಯದ ವಾಸುದೇವರವರಲ್ಲಿ ಒಂದು ದಿನ "ಎಲ್ಲಾದ್ರೂ ಕೆಲ್ಸ ಇದ್ರೆ ಹೇಳಿ ಸಾರ್,ಹೋಟೆಲಾದ್ರೂ ಪರ್ವಾಗಿಲ್ಲ,ಮನೆಗೆಲಸವಾದ್ರೂ ಆಗ್ಬಹುದು"ಎಂದಾಗ ಅವರು"ಮೊನ್ನೆ ಗೆಳೆಯ ಅನಂತಯ್ಯನನವರು ತಮ್ಮ ಮನೆಯಲ್ಲಿ ಕೆಲಸಕ್ಕೆ ಹುಡುಗರು ಇದ್ರೆ ಹೇಳಿ,ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂದಿದ್ರು.ಒಳ್ಳೆಯದಾಯಿತು ನೋಡು ನಾನು ಅವರಿಗೆ ಫೋನ್ ಮಾಡಿ ಕೇಳುತ್ತೇನೆ.ನಿನ್ನ ಸಮಸ್ಯೆಯೂ ಪರಿಹಾರವಾಗಬಹುದು" ಎಂದಾಗ ಮನುವಿನಲ್ಲಿ ಸಮಾಧಾನದ ನಿಟ್ಟುಸಿರಿತ್ತು.
ಅಂದು ಇನ್ನೂ ಬೆಳಗಿನ ಜಾವ ಬಾಗಿಲು ಟಕ್ ಟಕ್ ಎಂದು ಬಡಿವ ಸದ್ದಾಗಿ ವಯಸ್ಸಾದ ಹಿರಿಯರೊಬ್ಬರು ಮನೆಯಿಂದ ಹೊರಬಂದು,ಹೊರಗಡೆ ದೊಡ್ಡದೊಂದು ಬ್ಯಾಗು ಹಿಡಿದು ನಿಂತಿದ್ದ ಮನುವನ್ನು ಕಂಡು ಪ್ರಶ್ನಾರ್ಥಕವಾಗಿ ದಿಟ್ಟಿಸತೊಡಗಿದಾಗ ಮನು ನಮ್ರವಾಗಿ"ಸಾರ್ ಅನಂತಯ್ಯನವರ ಮನೆ ಇದೇ ಅಲ್ವಾ? ವಾಸುದೇವರವರು ಕಳುಹಿಸಿದ್ದು.ಕೆಲಸಕ್ಕೆಂದು ಬಂದಿದ್ದೀನಿ."ಅಂದಾಗ ಅನಂತಯ್ಯನವರು"ಹಾಂ ನೀನಾ!?ನಾನು ಅವನ ಹತ್ತಿರ ಕೆಲಸಕ್ಕೆ ಯಾರಾದ್ರೂ ಇದ್ರೆ ಹೇಳು ಅಂದಿದ್ದೆ.ಅವನು ಕಳುಹಿಸಿದ್ನಾ?ಬಾಪ್ಪಾ ಒಳಗೆ ಬಾ.."ಎಂದು ದೊಡ್ಡದಾಗೇ ಬಾಗಿಲು ತೆರೆದರು.
ಆ ಮನೆ ಕಂಡೇ ಮನುವಿಗೆ ಆಶ್ಚರ್ಯವಾಗಿತ್ತು.ದೊಡ್ಡದಾದ ಬಂಗಲೆಯಂತಹ ಮನೆ, ಪುಟ್ಟ ಗುಡಿಸಲಿನಲ್ಲಿ ಇಷ್ಟು ವರ್ಷ ಕಳೆದ ಅವನಿಗೆ ಅರಮನೆ ಹೊಕ್ಕಂತಾಗಿತ್ತು.ಅಷ್ಟರಲ್ಲಿ ಅನಂತಯ್ಯನವರು ಕೆಲಸದವನೊಬ್ಬನನ್ನು ಕರೆದು"ಈ ಹುಡುಗನಿಗೆ ಆ ಹಿಂದುಗಡೆಯ ರೂಮು ತೋರಿಸು,ಕೈ ಕಾಲು ಮುಖ ತೊಳೆದುಕೊಂಡು ಬರಲಿ"ಎಂದು ಅವನ ಹಿಂದೆಯೇ ಕಳುಹಿಸಿದರು. ಅಂದಿನಿಂದ ಆ ಮನೆ ಅವನದಾಯಿತು.ತನ್ನ ಮನೆಯಲ್ಲಿ ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದ ಮನುವಿಗೆ ಈಗ ಹೊಟ್ಟೆ ತುಂಬಾ ಊಟ, ಕಣ್ತುಂಬಾ ನಿದ್ದೆ,ಜೊತೆಗೊಂದಿಷ್ಟು ಸಂಬಳ ಸಿಗುತ್ತಿತ್ತು.ಮನುವಿಗೆ ಇದನ್ನೆಲ್ಲಾ ಕಂಡು"ನೀನು ತುಂಬಾ ಅದೃಷ್ಟದ ಹುಡುಗನಂತೆ,ಈತನಿಂದಲೇ ನಿಮಗೆ ಒಳ್ಳೆಯದಾಗುತ್ತದೆ ಎಂದು ನಿನ್ನ ಜಾತಕ ನೋಡಿದ ಮಕ್ಕಿತ್ತಾಯರು ಹೇಳಿದ್ರು"ಎಂದು ಚಿಕ್ಕಂದಿನಿಂದಲೇ ಅವನ ಅಮ್ಮ ಹೇಳುತ್ತಿದ್ದ ಮಾತುಗಳು ಈಗ ನೆನಪಿಗೆ ಬಂದು ಬಹುಶಃ ನನ್ನ ಅದೃಷ್ಟ ಎಂದರೆ ಇದೇ ಇರಬೇಕು ಎಂದು ಮನಸ್ಸಿನಲ್ಲಿಯೇ ಅಂದು ಕೊಂಡನು.
ಅನಂತಯ್ಯನವರಿಗೆ ಮನೆ ಬೇಕಾದಷ್ಟು ಆಸ್ತಿ ಎಲ್ಲವೂ ಇತ್ತು.ಇದೆಲ್ಲವನ್ನುತನ್ನ ಜವ್ವನದ ಕಠಿಣ ದುಡಿಮೆಯಿಂದಲೇ ಸಂಪಾದಿಸಿದ್ದು ಎಂದು ಅವರ ಮಾತಿನಲ್ಲಿಯೇ ಕೇಳಿಸಿಕೊಂಡಿದ್ದನು.ಆದರೆ ಈಗ ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ.ಹೆಂಡತಿಗೂ ವಯಸ್ಸಾಗಿದೆ,ಆದರೆ ಮಕ್ಕಳು ಯಾರೂ ಇಲ್ಲವೆಂದಲ್ಲ. ಒಂದು ಹೆಣ್ಣು ಹಾಗೂ ಒಬ್ಬ ಗಂಡು ಮಗು. ಹೆಣ್ಣು ಮಗಳನ್ನು ಶ್ರೀಮಂತ ಮನೆತನಕ್ಕೆ ಮದುವೆ ಮಾಡಿಕೊಟ್ಟ ಮೇಲೆ ಆಕೆಗೆ ತವರಿನ ನೆನಪಾಗುತ್ತಿದ್ದುದು ಅಪರೂಪ.ಅವಳ ಸಂಸಾರವೇ ಅವಳ ಸರ್ವಸ್ವವಾಗಿ ಹೋಯಿತು ಎಂದು ಅನಂತಯ್ಯನವರು ಮನುವಿನ ಬಳಿ ಒಮ್ಮೆ ಭಾರವಾದ ಹೃದಯದಿಂದಲೇ ಹೇಳಿದ್ದರು.ಇನ್ನು ತಮ್ಮ ಕೊನೆಗಾಲಕ್ಕೆ ಚಿತೆಗೆ ಕೊಳ್ಳಿಯಿಡಲು ಒಬ್ಬನೇ ಸಾಕು ಎಂದು ಮಗನನ್ನು ಬಹಳ ಮುದ್ದಿನಿಂದಲೇ ಸಾಕಿದ್ದೆವು.ಆತ ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಸೇರಿ ಹೆಸರುಗಳಿಸಬೇಕೆಂದು ಕೊಂಡಿದ್ದೆವು.ಆದರೆ ಆತನ ದಾರಿಯೇ ಬೇರೆ,ಓದಿ ಕೆಲಸಕ್ಕೆಂದು ವಿದೇಶಕ್ಕೆ ಹೋಗುತ್ತೇನೆ ಎಂದವನು ಪಟ್ಟು ಬಿಡಲಿಲ್ಲ.ಕೊನೆಗೊಂದು ದಿನ ಅವನೂ ಹಾರಿಹೋದ.ರೆಕ್ಕೆ ಬಲಿತ ಮೇಲೆ ಯಾರ ಹಂಗೇನು?ಆದರೂ ಅದೊಂದು ದಿನ ಮರಳಿ ಬರುತ್ತಾನೆ ಎನ್ನುವ ಭರವಸೆಯೊಂದಿಗೆ ಬದುಕುತ್ತಿದ್ದೇವೆ ಎಂದು ಆಳವಾದ ನಿಟ್ಟುಸಿರು ಚೆಲ್ಲಿ ಹೇಳಿದ್ದರು.ಇದನ್ನೆಲ್ಲಾ ಕೇಳಿ ,ಈ ಸಂಪತ್ತು ಐಶ್ವರ್ಯವೆಂದರೆ ಹೀಗೇ.. ಇದ್ದರೂ ಅನುಭವಿಸುವ ಯೋಗವಿರುವುದಿಲ್ಲ,ಅಗತ್ಯವಿರುವವರಿಗೆ ದಕ್ಕುವುದಿಲ್ಲ.ಅದಕ್ಕೂ ಒಂದು ಅದೃಷ್ಟವಿರಬೇಕು ಮನಸ್ಸಿನಲ್ಲಿಯೇ ಅಂದುಕೊಂಡಿದ್ದನು.
ಈಗ ಮನುವಿನ ಮನೆಯ ಪರಿಸ್ಥಿತಿ ಕೊಂಚ ಸುಧಾರಿಸತೊಡಗಿತ್ತು. ನೀಲಕ್ಕನಿಗೂ ವಯಸ್ಸಾಗತೊಡಗಿತ್ತು. ಇಷ್ಟರವರೆಗೆ ಕಷ್ಟದಲ್ಲಿ ಬೆಂದು ಹೊದ ಜೀವ ಆಕೆ ಇನ್ನೆಷ್ಟು ದಿನ ಜೀವ ತೇದಾಳು? ಜತೆಯಲ್ಲಿ ತಂಗಿಯ ಓದಿನ ಜವಾಬ್ಧಾರಿಯನ್ನು ಮನು ನಿಭಾಯಿಸುತ್ತಿದ್ದ.ಅದರಲ್ಲೂ ಇನ್ನೂ ಹೆಚ್ಚಿನ ದಿನ ಇಲ್ಲಿದ್ದರೂ ಭವಿಷ್ಯವಿಲ್ಲ,ಎಷ್ಟು ದಿನ ಹೀಗೆ ಬೇರೆಯವರ ಚಾಕರಿ ಮಾಡಿ ಬದುಕಲು ಸಾಧ್ಯ?ಬೇರೇನಾದರೂ ಕೆಲಸ ಹುಡುಕಬೇಕೆಂದುಕೊಂಡಿದ್ದನಾದರೂ ಈ ಮನೆ ಹಿರಿಯರ ಪ್ರೀತಿ ಅವನನ್ನು ಕಟ್ಟಿ ಹಾಕಿತ್ತು.ಇಷ್ಟರವರೆಗೆ ತನಗೆ ಬದುಕು ಕೊಟ್ಟು ಸಹಾಯ ಮಾಡಿದ ಅವರನ್ನು ಬಿಟ್ಟು ಹೋಗಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ.ಅವನೂ ಆ ಮನೆಯವನಾಗಿ ಬಿಟ್ಟಿದ್ದ.
ಆದರೂ ಅನಂತಯ್ಯನವರ ಬಳಿ ಕೆಲಸ ಬಿಡುವ ವಿಚಾರ ಹೇಳಬೇಕೆಂದು ಆ ದಿನ ಅವರ ಬಳಿಗೆ ಹೋಗಿದ್ದ.ಇಷ್ಟು ದಿನ ಲವಲವಿಕೆಯಿಂದ ಇರುತ್ತಿದ್ದ ಅವರು ಕಳೆಗುಂದಿದ್ದರು,ಕನ್ನಡಕದೊಳಗಿಂದ ಕಣ್ಣಂಚು ಒದ್ದೆಯಾಗಿತ್ತು"ಸಾರ್ ಏನು ವಿಷಯ?ಯಾಕೆ ಹೀಗಿದ್ದೀರಾ,ಆರೋಗ್ಯ ಸರಿ ಇಲ್ವಾ?ಡಾಕ್ಟರ್ ಬಳಿ ಹೋಗಿ ಬಂದರಾಯ್ತು ನಡೀರಿ ಹೋಗೋಣ"ಎಂದು ಕೈ ಹಿಡಿದು ಮೇಲೆತ್ತಿದ. ಆಗ ಅನಂತಯ್ಯನವರು ಬೇಸರದಿಂದಲೇ ನಿನ್ನಲ್ಲಿ ಹೇಳದಿದ್ದರೆ ಏನು ಪ್ರಯೋಜನ ಹೇಳು?ನನ್ನ ಮಗ ಇವತ್ತು ಫೋನ್ ಮಾಡಿದ್ದ,"ಅಪ್ಪಾ ನಾನು ಇಲ್ಲಿಯೇ ಅಮೇರಿಕಾದ ಹುಡುಗಿಯನ್ನೇ ಮದುವೆಯಾಗಬೇಕೆಂದು ಕೊಂಡಿದ್ದೇನೆ.ನಾವಿಬ್ಬರೂ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದೇವೆ.ನಿಮ್ಮಿಬ್ಬರ ಆಶೀರ್ವಾದ ಇರಲಿ.ನಿಮಗೆ ಹಣದ ಅವಶ್ಯಕತೆಯೇನಾದರೂ ಇದ್ದಲ್ಲಿ ಕಳುಹಿಸುತ್ತೇನೆ" ಎಂದು ಸುಲಭವಾಗಿ ಹೇಳೀಬಿಟ್ಟ.ಇವರು ನಮ್ಮನ್ನು ಅರ್ಥಮಾಡಿಕೊಂಡಿದ್ದು ಇಷ್ಟೇನಾ ಹೇಳು?ಕೊನೆಗಾಲಕ್ಕೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ,ತಮಗೆ ಆಸರೆಯಾಗುತ್ತಾರೆ,ಇದೆಲ್ಲಾ ಒಂದು ಭ್ರಮೆ.ನಮ್ಮ ಬದುಕಿನಲ್ಲಿ ಯಾರಿಂದಲೂ ಏನನ್ನೂ ನಿರೀಕ್ಷಿಸಬಾರದು ಎಂಬುದು ಎಷ್ಟು ಸತ್ಯ ನೋಡು!ಎಲ್ಲಾ ಅವರವರ ಹಣೆಬರಹ ಎಂದು ಕಣ್ಣೀರೊರೆಸಿಕೊಂಡರು.
ಇದಾಗಿ ಸುಮಾರು ಎರಡು ಎರಡು ವಾರಗಳು ಕಳೆದಿರುವಾಗ ಅನಂತಯ್ಯನವರ ಹೆಂಡತಿ ಕಾಯಿಲೆಯಿಂದ ಹಾಸಿಗೆ ಹಿಡಿದು ಬಿಟ್ಟರು.ಅವರ ಎಲ್ಲಾ ಚಾಕರಿಯ ಜವಾಬ್ಧಾರಿ ಮನುವಿನ ಮೇಲೆ ಬಿತ್ತು.ತನ್ನ ಸ್ವಂತ ತಾಯಿಯಂತೆಯೇ ನೋಡಿಕೊಂಡನು.ವಯಸ್ಸಾದ ಜೀವ ಅದೊಂದು ದಿನ ಕಾಯಿಲೆ ಉಲ್ಬಣವಾಗಿ ಇನ್ನಿಲ್ಲವಾಗಿ ಬಿಟ್ಟರು.ಅನಂತಯ್ಯನವರೂ ದುಃಖದಿದ ಕುಸಿದು ಹೋಗಿದ್ದರು.ಈವರೆಗೆ ತನ್ನ ಜೊತೆಯಲ್ಲಿ ಸಾಗುತ್ತಿದ್ದ ಬದುಕ ಬಂಡಿಯ ಒಂದು ಚಕ್ರ ಕಳಚಿ ಬಿದ್ದಂತಾದ ಅವರು ಈ ಗುಂಗಿನಲ್ಲಿಯೇ ದಿನ ಕಳೆಯತೊಡಗಿದರು.
ಆ ದಿನ ಮನು ಎಂದಿನಂತೆ ಬೆಳಗ್ಗಿನ ಚಹಾ ಕೊಡಲೆಂದು ಅನಂತಯ್ಯನವರ ಕೋಣೆಯ ಬಾಗಿಲ ಬಳಿ ಹೋದಾಗ ಅದು ತೆರೆದೇ ಇತ್ತು.ನೋಡಿದರೆ ಅವರ ಸುಳಿವೇ ಇರಲಿಲ್ಲ.ಬದಲಾಗಿ ಹಾಸಿಗೆಯ ಮೇಲೊಂದು ಪತ್ರವಿತ್ತು ಅಷ್ಟೇ!ಅದರಲ್ಲಿ"ಪ್ರೀತಿಯ ಮನು..ನನಗೆ ಈ ಮನೆ, ಸಂಸಾರ ,ಬದುಕಿನ ಜಂಜಾಟ ಸಾಕಾಗಿ ಹೋಗಿದೆ.ಈ ನನ್ನ ಮನಸ್ಸಿಗೆ ಬೇಕಾದುದು ಶಾಂತಿ ನೆಮ್ಮದಿ.ಅದು ಈ ಲೌಕಿಕ ಬದುಕಿನಲ್ಲಿ ಸಾಧ್ಯವಿಲ್ಲ.ಇಷ್ಟರವರೆಗೆ ದುಡಿದಿದ್ದು,ಗಳಿಸಿದ್ದು ಆಯಿತು.ಇನ್ನು ನೆಮ್ಮದಿಯ ಸೆಲೆ ಹುಡುಕುತ್ತಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿ ನನ್ನ ಮುಂದಿನ ಜೀವನ ಕಳೆಯಬೇಕೆಂದು ಕೊಂಡಿದ್ದೇನೆ.ನಮ್ಮ ಮಕ್ಕಳನ್ನಾದರೂ ಕೊನೆಗಾಲಕ್ಕೆ ನೋಡುವ ಬಾಗ್ಯ ನಮಗಿಲ್ಲ.ಆ ಕೊರತೆಯನ್ನು ನೀನು ನೀಗಿಸಿದೆ.ನಿನ್ನ ಸೇವೆಗೆ ನಾನು ಕೃತಜ್ಙನಾಗಿದ್ದೇನೆ.ನನ್ನ ಈ ಮನೆ ಆಸ್ತಿಯೆಲ್ಲವೂ ಇನ್ನು ಮುಂದೆ ನಿನ್ನದೇ.ಎಲ್ಲವನ್ನೂ ನಿನ್ನ ಹೆಸರಿಗೆ ಬರೆದಿಟ್ಟಿದ್ದೇನೆ.ನಿನಗೆ ಒಳ್ಳೆಯದಾಗಲಿ.."ಓದಿ ಮುಗಿಸುತ್ತಿದ್ದಂತೆಯೇ ಕಣ್ಣೀರಿನ ಹನಿ ಅವನಿಗರಿವಿಲ್ಲದಂತೆಯೇ ಇಳಿಯತೊಡಗಿತ್ತು.ಅನಂತಯ್ಯನವರ ವಿಶಾಲ ಮನಸ್ಸಿನ ಮುಂದೆ ಅವನು ಕುಬ್ಜನಾಗಿ ಹೋಗಿದ್ದ.ಹೊಸ ಜವಾಬ್ದಾರಿಯೊಂದಿಗೆ ಆ ದಿನ ಬೆಳಗಾಗಿತ್ತು.ಅದರೊಂದಿಗೆ ಮನುವಿನ ಬಾಳಲ್ಲೂ ಬೆಳಕು ಮೂಡಿತ್ತು.
"ಮನು ನೀನು ಅದೃಷ್ಟದ ಹುಡುಗನಂತೆ......"ಅಮ್ಮ ಅಂದು ಹೇಳಿದ್ದ ಮಾತುಗಳು ಮತ್ತೆ ಮತ್ತೆ ಮನಪಟಲದಲ್ಲಿ ಮೂಡತೊಡಗಿದ್ದವು.ಮನೆಯ ನೆನಪಾಗಿ ಅಮ್ಮನಿಗೆ ಕೂಡಲೇ ಫೋನಾಯಿಸಿದ.ಮನೆಯ ಫೋನ್ ಟ್ರಿಣ್ ಟ್ರಿಣ್ ರಿಂಗಣಿಸುತ್ತಿತ್ತು.ಮನದಲ್ಲಿ ನೆಮ್ಮದಿಯ ಉಸಿರಿತ್ತು..