ಗುರುವಾರ, ಫೆಬ್ರವರಿ 25, 2010

ಇನ್ನೊಂದಿಷ್ಟು ಹನಿಗಳು

ಸುಖ ದುಃಖಕೆ
ಎರಡಕೂ ಕಾರಣ
ಈ ಹಣ
ಇಲ್ಲದಿರೆ ಕೊರಗುವರು
ಬದುಕೇ ಶೂನ್ಯವೆಂಬಂತೆ
ಇದ್ದರೂ ಕೈಯಲ್ಲಿ
ಕಂತೆ ಕಂತೆ
ಹೊತ್ತು ತಿರುಗಬೇಕು
ತಲೆಯಲ್ಲಿ ನೂರು ಚಿಂತೆ!!!

.............

ವರದಕ್ಷಿಣೆಯೆಂಬ ದೇಣಿಗೆ
ಜೊತೆಗೆ ತಾಳಿಯೆಂಬ
ನೇಣಿಗೆ
ಹೆಣ್ಣು ಕೊಟ್ಟು ಬಿಟ್ಟರಾಯ್ತು
ಅದುವೇ
ಇಂದಿನ ಮದುವೆ !!!!!!!

.............


ಬೇಕಿಲ್ಲ ಹುಡುಗಿ
ನಿನ್ನಪ್ಪನ ಹಣ
ಯಾವುದೇ ಆಸ್ತಿ
ನಿನ್ನ ಹೃದಯದಲಿ
ಒಂದಿಷ್ಟು ಜಾಗ
ಸಿಕ್ಕರೆ ನನಗದೇ
ಜಾಸ್ತಿ !!

.............


ಪ್ರೀತಿಗಿಲ್ಲ ಜಾತಿಮತ
ಸಿರಿವಂತಿಕೆಯ
ಅಂತರ
ಆದರೆ ಶುರುವಾಗುವುದೇ
ಮದುವೆ ವಿಷಯ
ಬಂದ ನಂತರ !!!

ಗುರುವಾರ, ಫೆಬ್ರವರಿ 18, 2010

ಒಂದು ಕನಸು

ನಿನ್ನ ನೆನಪಿನ ಒಂದು ಕನಸು
ನನ್ನ ಮನಸನು ಕಾಡಲು
ಅನಿಸಿದಂತೆ ಬಂದ ಹಾಗೆ
ನೀನೆ ಕೈಯ ಹಿಡಿದು ಜೊತೆಗೆ!


ಮನದಿ ಮಿಡಿವ ನೂರು ವೀಣೆ
ನುಡಿಸುತಿರುವ ತಂತಿ ನೀನೆ
ಹೊಮ್ಮುತಿರಲು ಮೌನರಾಗ
ಭಾರವಾಗಿದೆ ಭಾವನೆ...


ಮೋಡಕವಿದ ಇರುಳಿನಲ್ಲಿ
ಚಂದ್ರನಿರದ ಬಾನಿನಲ್ಲಿ
ಮಿಂಚು ಹೊಳೆದು ಹರಿದ ಹಾಗೆ
ನೀ ಬಂದೆ ನನ್ನ ಬಾಳಿಗೆ....


ನಾ ರೆಕ್ಕೆ ಮುರಿದ ಒಂಟಿ ಹಕ್ಕಿ
ಹಾರುವಾಸೆಯೀಗ ಗರಿಯ ಬಿಚ್ಚಿ
ಕೊಲ್ಲುತಿದೆ ನನ್ನ ಹೇಳಲಾಗದ
ಮನದ ಮೂಕ ವೇದನೆ!

ಶನಿವಾರ, ಫೆಬ್ರವರಿ 6, 2010

ಒಂದಿಷ್ಟು ಹನಿಗಳು

ಮಕ್ಕಳನ್ನು ಸಾಕಲು
ತಂದೆ ತಾಯಿ ಪಟ್ಟರು
ಬಹಳಷ್ಟು ಪರಿಶ್ರಮ
ಆದರೆ ಕೊನೆಗೆ
ಸೇರಿದರು ವೃದ್ಧಾಶ್ರಮ!

.............

ಅಂದು ಅವರಿಬ್ಬರೇ
ಆ ಕೋಣೆ ತುಂಬಾ
ನಗು
ಇಂದು ತೊಟ್ಟಿಲಲ್ಲಿ
ಜೊತೆಗೊಂದು
ಪುಟ್ಟ ಮಗು!

.............

ಭೂಮಿ ಸುತ್ತ ಚಂದ್ರ
ಸುತ್ತುವುದನು
ಕಂಡು ಸೂರ್ಯನಿಗೂ
ಎಷ್ಟೊಂದು
ಹೊಟ್ಟೆಯುರಿ?
ಅದಕಾಗಿಯೇ
ಸುಡುತ್ತಿದ್ದಾನೆ
ಈ ಪರಿ ಬಿಸಿಲು ಕಾರಿ!

.............

ನೀ ನನಗೆ ನಾ ನಿನಗೆ
ಕೈ ಹಿಡಿದು ನಡೆವ
ಹುಡುಗನ ನಂಬಿ
ಕೈ ಚಾಚಿದಳು ಹುಡುಗಿ
ಕೈ ಕೊಟ್ಟನು ಹುಡುಗ!

ಗುರುವಾರ, ಫೆಬ್ರವರಿ 4, 2010

ಸಂಜೆಗಣ್ಣಿನ ಸುತ್ತ......

ನೋಡಿದ ತಾತ ಸುತ್ತಲೂ
ಏನೂ ಕಾಣಿಸದು ಆತನಿಗೆ
ಎಲ್ಲೆಲ್ಲೂ ತುಂಬಿದೆ ಕತ್ತಲು
ಯಾಕೆಂದರೆ;
ಮುದ್ದಿನ ಮಡದಿ ಮೊನ್ನೆ
ಮೊನ್ನೆಯಷ್ಟೆ ಸತ್ತಳು!

ದುಡಿದರು ಬೆಂದರು
ನೊಂದರು ಅಂದು ಕಷ್ಟದಲಿ
ಈಗ ಮನೆ ತುಂಬಾ
ಮಕ್ಕಳು ಮೊಮ್ಮಕ್ಕಳು!

ತಾತನದು ಈಗ ನರಕದ ಬದುಕು
ಯಾರೂ ಇಲ್ಲ ಕಷ್ಟವ ಕೇಳಲು
ತಮಗೆ ತಾವೇ ಹೊರೆಯಾದರೆ ಕೊನೆಗೆ
ಯಾರಿರುವರು ನಮ್ಮ ಸಾಕಲು?

ತಾತನಿಗೆ ಬರದೀಗ ಮಲಗಿದರೆ
ರಾತ್ರಿಯಿಡೀ ನಿದ್ದೆ
ಪಾಪ ತಿಳಿಯುವರಾರು ?
ಆ ಕನ್ನಡಕದೊಳಗಿನ ಒದ್ದೆ!

ಈ ಜೀವ ದುಡಿದು
ಬದುಕುವವರೆಗೆ ಅಷ್ಟೇ
ಮಕ್ಕಳು ಮರಿಗಳು
ಬಾಂಧವ್ಯದ ನಂಟು;

ಹೊರೆಯಾಗದೆ ಹೀಗೆ
ಜೀವನ ಸಂಜೆಯ
ಕಳೆಯುವ ಭಾಗ್ಯ
ಎಷ್ಟು ಮಂದಿಗುಂಟು????

ಬುಧವಾರ, ಫೆಬ್ರವರಿ 3, 2010

ಹುಡುಕಾಟ

ಅವರಿಬ್ಬರೂ ಭಾಲ್ಯ ಸ್ನೇಹಿತರು. ಪರಸ್ಪರ ಪ್ರೀತಿಸುತ್ತಿದ್ದರು.ಆಕೆ ಓದು ಮುಗಿಸಿ ಕೆಲಸಕ್ಕೆ ಸೇರಿದ್ದರೆ,ಆತ ದೂರದೂರಿಗೆ ಕೆಲಸ ಅರಸಿ ಹೋಗಿದ್ದ.
ಅವರಿಬ್ಬರೂ ಪರಸ್ಪರ ಅಗಲಿ ಬಹಳ ವರ್ಷಗಳೇ ಆಗಿದ್ದವು.ಅಂದು ಅವಳು ಕೆಲಸದ ನಿಮಿತ್ತ ದೆಹಲಿಗೆ ಹೊರಟಿದ್ದ ರೈಲು ಸೋಲಾಪುರಕ್ಕೆ ಬಂದಾಗ
ಮುಂಜಾನೆ ನಾಲ್ಕು ಗಂಟೆ.ಪಕ್ಕನೆ ನಿದ್ದೆಯಿಂದ ಎದ್ದಳು,ಕಿಟಕಿ ತೆರೆದು ನೋಡಿದರೆ ಕಣ್ಣೆದುರು ಆತ ನಿಂತಿದ್ದ.ನಂಬಲಾಗಲಿಲ್ಲ;ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು
ಅದು ಅವನೇ ಆಗಿದ್ದ.ಕರೆದು ಮಾತನಾಡಬೇಕು ಅನ್ನುವಷ್ಟರಲ್ಲಿ ರೈಲು ನಿಲ್ದಾಣ ಬಿಟ್ಟಿತ್ತು.

ಆದರೆ ಇದು ಯಾವುದರ ಪರಿವೆ ಇಲ್ಲದಂತೆ ಆತ ತನ್ನ ಪಾಡಿಗೆ ಎಂದಿನಂತೆ ಕೂಗುತಿದ್ದ;ಇಡ್ಲಿ...ವಡಾ...ಚಾ...ದೋಸಾ........