ಗುರುವಾರ, ಆಗಸ್ಟ್ 19, 2010

ಮೋಡಗಳು ಸರಿದಾಗ.....

(ಮಂಗಳ ವಾರಪತ್ರಿಕೆ 10.06.2009ರಲ್ಲಿ ಪ್ರಕಟವಾದ ಕಥೆ)

ಆ ದಿನ ಹೊತ್ತು ಕಳೆದು ಬೆಳಗಾದರೂ ಇನ್ನೂ ಸೂರ್ಯನ ಸುಳಿವೇ ಇರಲಿಲ್ಲ.ಮುಸುಕಿದ ಮಂಜು ಸೂರ್ಯನನ್ನು ಮರೆಮಾಡಿತ್ತು.ಇನ್ನೂ ಬೆಳಕು ಹರಿದಿಲ್ಲವೆಂದು ಮನದಲ್ಲೇ ಗೊಣಗುತ್ತಾ ಮಗ್ಗುಲು ಬದಲಿಸಿ ಮತ್ತೆ ಕಂಬಳಿ ಹೊದ್ದು ಮಲಗಿದ ಸಂಗೀತಾಳಿಗೆ ತಾಯಿ ಬಂದು ಎಚ್ಚರಿಸಿದಾಗಲೇ ವಾಸ್ತವದ ಅರಿವಾದದ್ದು. ದಡಬಡನೆ ಎದ್ದು ತಯಾರಾಗಿ ಕೆಲಸಕ್ಕೆಹೊರಟಾಗ ಸಮಯ ಸರಿಯಾಗಿ ಎಂಟೂವರೆ.ಇನ್ನರ್ಧ ತಾಸಿನಲ್ಲಿ ಆಫೀಸು ತಲುಪದಿದ್ದರೆ ಬೆಳಿಗ್ಗೆಯೇ ಮ್ಯಾನೇಜರ್ ಕೈಯಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳಬೇಕಾಗುತ್ತೆ ಎಂದೆನ್ನುತ್ತಲೇ ಅವಸರಸರವಾಗಿ ಹೊರಡಲನುವಾದಳು.
ಸಂಗೀತಾ ಕೆಲಸ ಮಾಡುತ್ತಿದ್ದುದು ಖಾಸಗಿ ಕಂಪೆನಿಯೊಂದರಲ್ಲಿ. ತಿಂಗಳ ಕೊನೆಯಲ್ಲಿ ಬರುವ ಸಂಬಳ ತಾಯಿ ಹಾಗೂ ಇಬ್ಬರು ಚಿಕ್ಕ ತಂಗಿಯರ ಖರ್ಚಿಗೆ ಸಾಲದು,ಆದರೂ ನಿಭಾಯಿಸಬೇಕಾದ ಹಿರಿಯ ಜವಾಬ್ದಾರಿ ಹಿರಿಮಗಳಾದ ಅವಳ ಮೆಲಿತ್ತು."ಒಬ್ಬನೇ ಒಬ್ಬ ಗಂಡು ಮಗ ಇರಬಾರದಿತ್ತೆ?ಎಷ್ಟಾದರೂ ಮನೆಗೆ ಹಿರಿಮಗಳಾಗಿ ಹುಟ್ಟಬಾರದು,ಎಲ್ಲಾ ನಾವು ಪಡಕೊಂಡು ಬಂದಿದ್ದು"ಹೀಗೆ ಮನದಲ್ಲೇ ನೊಂದುಕೊಂಡಿದ್ದು ಎಷ್ಟೋ ಬಾರಿ..!
ಸುಮಾರು ನಾಲ್ಕು ವರ್ಷಗಳಿಂದ ಒಂದೇ ಕಡೆ ಕೆಲಸಮಾಡುತ್ತಿರಬೇಕಾದರೆ ಆಕೆ ಆ ಕಛೇರಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.ಎಲ್ಲರೊಂದಿಗೂ ಆಕೆ ಹೊಂದಿಕೊಂಡಉ ಹೋಗಿದ್ದಳು.ಅದರಲ್ಲೂ ಸಹೋದ್ಯೋಗಿ ಗಿರೀಶನ ಜತೆ ತುಸು ಹೆಚ್ಚಿನ ಸಲುಗೆ.ಅವನೂ ಒಳ್ಳೆಯವನೇ,ಕೈ ತುಂಬಾ ಸಂಬಳ,ಅಷ್ಟೇ ಸಭ್ಯ.ಇವಳನ್ನು ಆಕರ್ಷಿಸಿದ್ದ.ಯಾರನ್ನೂ ಒಂದುಕ್ಷಣ ಮೋಡಿ ಮಾಡುವಂತಹ ಅವಳ ನಗು ಅವನಿಗೂ ಹುಚ್ಚು ಹಿಡಿಸಿತ್ತು.ಸದಾ ಮುಗುಳ್ನಗುತ್ತಿರುವ ಅವಳ ಮುಖದಲ್ಲಿ ದುಗುಡ ಸಿಟ್ಟು ತುಂಬಿಕೊಂಡಿರುವುದನ್ನು ಕಾಣುವುದೇ ಅಪರೂಪ.ಹೀಗೆ ಪರಸ್ಪರ ಮೆಚ್ಚಿಕೊಂಡು ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.ಮೊದಮೊದಲು ಮನೆಯಲ್ಲಿ ಅವಳ ತಾಯಿ ನಿರಾಕರಿಸಿ"ನೋಡು ಸಂಗೀತಾ ನೀನು ತಪ್ಪು ಮಾಡುತ್ತಿದ್ದೀಯಾ!ಅವರು ಶ್ರೀಮಂತರು.ಅವರಿಗೂ ನಮಗೂ ಎಲ್ಲಿಂದೆಲ್ಲಿಯ ಹೋಲಿಕೆ?ನಾಳೆ ನಡುನೀರಿನಲ್ಲಿ ಕೈಬಿಟ್ಟರೆ ನಮ್ಮ ಗತಿಯೇನು?ನಿನಗೆ ಇನ್ನೂ ಮದುವೆಯಾಗದ ತಂಗಿಯಂದಿರಿದ್ದಾರೆಂಬುದನ್ನು ಮರೆಯಬೇಡ"ಎಂದು ಬಲವಾಗಿಯೇ ತಳ್ಳಿಹಾಕಿದ್ದರು.ಆದರೆ ಸಂಗೀತಾಳಿಗೆ ಗಿರೀಶನ ಮೇಲೆ ತುಂಬು ವಿಶ್ವಾಸವಿತ್ತು.ಕೈ ಬಿಡಲಾರನೆಂಬ ಭರವಸೆಯಿತ್ತು.ಅದೊಂದು ದಿನ ಗಿರೀಶನೇ ಬಂದು ಅವಳ ತಾಯಿಯಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಮಗಳ ಭವಿಷ್ಯದ ದೃಷ್ಟಿಯಿಂದ ಒತ್ತಾಯಕ್ಕೆ ಕಟ್ಟು ಬೀಳಬೇಕಾಯಿತು.ಅವನ ಮನೆಯಿಂದಲೂ ಒಪ್ಪಿಗೆ ದೊರೆತು ಇಬ್ಬರೂ ಹೊಸ ಬದುಕಿಗೆ ಅಡಿಯಿರಿಸಿದ್ದರು.ಮದುವೆಯಾಗಿ ಮನೆಯಿಂದ ಹೊರಬಂದಿದ್ದರೂ ಸಂಗೀತಾ ತನ್ನ ತಾಯಿ ತಂಗಿಯರನ್ನು ಮರೆತವಳಲ್ಲ.ಗಿರೀಶನೂ ಅಷ್ಟೇ ಅವರ ಸುಖದುಃಖಗಳಲ್ಲಿ ಸಮವಾಗಿ ಭಾಗಿಯಾಗುತ್ತಿದ್ದ.ತನ್ನ ಹೆಂಡತಿ ನೌಕರಿಯೆಂದು ಸಂಜೆಯ ತನಕ ಆಫೀಸಿನಲ್ಲಿ ಜೀವ ತೇಯುವುದು,ಜೊತೆಗೆ ಮನೆ ಕೆಲಸದಲ್ಲಿ ಒದ್ದಾಡುವುದನ್ನು ಅವನ ಕೈಲಿ ನೋಡಲಾಗದೆ ಅವಳನ್ನು"ನೀನು ಮನೆಯಲ್ಲಿ ಆರಾಮಾಗಿರು.ಈಗ ನನ್ನೊಬ್ಬನ ದುಡಿಮೆ ನಮಗಿಬ್ಬರಿಗೆ ಬೇಕಾದಷ್ಟು ಆಗುತ್ತೆ.ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು,ಮನೆಯ ಕಡೆ ನೋಡಿಕೊಂಡಿರು" ಎಂದಿದ್ದ.
ಈ ರೀತಿ ಬಹಳ ಸುಗಮವಾಗಿಯೇ ಸಾಗುತ್ತಿದ್ದ ಅವರ ಸಂಸಾರದಲ್ಲಿ ಬರಸಿಡಿಲೊಂದು ಬಂದೆರಗಿತ್ತು.ಅವರ ಮದುವೆಯಾಗಿ ಒಂದುವರ್ಷ ತುಂಬಲು ಎರಡು ದಿನ ಉಳಿದಿತ್ತು.ಅಂದು ಕಂಪೆನಿಯ ಕೆಲವು ಸಹೋದ್ಯೋಗಿ ಗೆಳೆಯರೊಡನೆ ಸೇರಿ ಪಿಕ್ ನಿಕ್ ಗೆಂದು ಗೋವಾ ತೆರಳಿದ್ದ ಗಿರೀಶ್ ಮರಳಿ ಬರಲೇ ಇಲ್ಲ. ಮೋಜಿಗೆಂದು ಈಜಾಡಲು ಹೋದ ಆತ ಆ ವಿಶಾಲ ಕಡಲ ಅಲೆಗಳಲ್ಲಿ ಒಂದಾಗಿ ಹೋದವನು ಶವವಾಗಿ ಸಿಕ್ಕಿದ್ದು ಮರುದಿನ.
ಇಷ್ಟೆಲ್ಲಾ ಆದರೂ ಸಂಗೀತಾಳಿಗೆ ಇದು ಯಾವುದರ ಅರಿವೇ ಇರಲಿಲ್ಲ.ಅಂದೇ ಅವರ ವಿವಾಹ ವಾರ್ಷಿಕೋತ್ಸವ.ಆಕೆ ಮದುಮಗಳಂತಾಗಿದ್ದಳು,ಆದರೆ ಮುನ್ನಾದಿನವೇ ಬರುತ್ತೇನೆ ಅಂದಿದ್ದ ಗಿರೀಶನ ಪತ್ತೆಯೇ ಇರಲಿಲ್ಲ.ಒಂದೆಡೆ ಮನೆಯಲ್ಲಿ ನೆಂಟರ ಗದ್ದಲ.ಆಕೆಗೋ ಆತನನ್ನು ಒಮ್ಮೆ ಕಾಣುವ ಹಂಬಲ!ದಾರಿ ಕಾಯುತ್ತಿದ್ದಂತೆ ವ್ಯಾನೊಂದು ಬಂದು ಮನೆ ಮುಂದೆ ಗಕ್ಕನೆ ನಿಂತಾಗ ಅವಳ ಆತಂಕ ನೂರು ಪಟ್ಟಾಗಿತ್ತು.ತಾನು ಜೀವವೇ ಇಟ್ಟುಕೊಂಡಿದ್ದ ಗಿರೀಶ್ ಜೀವ ಕಳೆದುಕೊಂಡು ಅದರಲ್ಲಿ ಮಲಗಿರುವುದನ್ನು ಕಂಡ ಆಕೆಗೆ ಆ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲ.ಗಿರೀಶನನ್ನು ಕಳೆದುಕೊಂಡ ಆಕೆ ಇನ್ನು ತನ್ನ ಬದುಕಿಗೆ ದಿಕ್ಕಿಲ್ಲವೆಂದು ನೆನೆದು ಕಂಗೆಟ್ಟವಳಾಗಿದ್ದಳು.ತಮ್ಮಿಬ್ಬರ ಸುಮಧುರ ದಾಂಒತ್ಯದ ಫಲ ಹೊಟ್ಟೆಯಲ್ಲಿ ಮೊಳಕೆಯೊಡೆಯುತ್ತಿರುವುದನ್ನು ನೆನೆದು ,ಭವಿಷ್ಯದ ಬಗೆಗೆ ಯೋಚಿಸಿ ಆಕೆಗೆ ದುಃಖ ಒತ್ತರಿಸಿಕೊಂಡು ಬರುತ್ತಿತ್ತು.ಕ್ರಮೇಣ ಎಲ್ಲರ ಸಮಾಧಾನ ಸಾಂತ್ವನದ ಫಲವಾಗಿ ಆಕೆ ಮತ್ತೆ ಮೊದಲಿನಂತಾಗಲು ಬಹಳ ಕಾಲವೇ ಹಿಡಿದಿತ್ತು.
ಈ ಕಾಲವೇ ಹೀಗೆ ಕ್ರಮೇಣ ಎಲ್ಲವನ್ನೂ ಮರೆಸುತ್ತದೆ.ಗಿರೀಶ್ ಇನ್ನಿಲ್ಲವಾಗಿ ಸುಮಾರು ಒಂದು ವರ್ಷವಾಗುತ್ತ ಬಂದಿದೆ.ಈಗ ಮತ್ತೆ ನೌಕರಿ ಮಾಡುವ ಅನಿವಾರ್ಯತೆ ಅವಳ ಪಾಲಿಗೆ ಬಂದಿತ್ತು.ಜೊತೆಯಲ್ಲೊಂದು ಮಗು,ಆ ಮಗುವಿನ ಲಾಲನೆ ಪಾಲನೆಯಲ್ಲಿ ಅವಳ ಎಲ್ಲಾ ದುಃಖ ನೋವು ಮರೆಯಾಗಿ ಹೋಗುತ್ತಿತ್ತು.ಹೀಗೆ ಎಲ್ಲಾ ಕಹಿ ನೆನಪುಗಳನ್ನು ಮರೆತು ಮತ್ತೆ ಹೊಸ ಹುರುಪಿನಿಂದ ಕೆಲಸಕ್ಕೆ ಹೊರಡಲು ಅವಳು ಸಿದ್ಧಳಾಗಿದ್ದಳು.
ಸಂಗೀತಾ ಪ್ರತೀದಿನ ಇದೇ ಸಮಯಕ್ಕೆ ಬಂದು ಬಸ್ಸಿಗಾಗಿ ಕಾಯುವುದು ರೂಢಿ.ವಿನಯ್ ಕೂಡಾ ಅದೇ ಸಮಯಕ್ಕೆ ಬಸ್ಸಿಗಾಗಿ ಅಲ್ಲೇ ಕಾಯುತ್ತಿದ್ದ.ಇಬ್ಬರೂ ಒಂದೇ ಕಡೆ ಹೋಗಬೇಕಾಗಿದ್ದರೂ ಬೇರೆ ಬೇರೆ ಆಫೀಸಿಸುಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಕೇವಲ ಮುಖ ಪರಿಚಯವಾಗಿ ಬಹಳ ದಿನಗಳಾಗುತ್ತ ಬಂದಿತ್ತು.ಅದೊಂದು ದಿನ ಬಸ್ಸಿನಲ್ಲಿ ಕಳೆದು ಹೋಗಿದ್ದ ಅವಳ ಪರ್ಸನ್ನು ಮರುದಿನ ಆತ ಮರಳಿ ತಂದೊಪ್ಪಿಸಿದಾಗ ಇಬ್ಬರ ನಡುವೆ ಮಾತುಕತೆಗೆ ದಾರಿ ಏರ್ಪಟ್ಟಿತ್ತು.ಜೊತೆಗೆ ಅವನ ಮೇಲೆ ಗೌರವ ವಿಶ್ವಾಸವೂ ಮೂಡಿತ್ತು.ಹೀಗೆ ಪರಸ್ಪರ ಪರಿಚಯವಾದ ನಂತರ ಇಬ್ಬರೂ ಒಳ್ಳೆಯ ಗೆಳೆಯರಂತಿದ್ದರು. ವಿನಯನೂ ಸ್ಫುರದ್ರೂಪಿ ಯುವಕ.ಇವಳೂ ಅಷ್ಟೇ,ಇನ್ನೂ ಮೂವತ್ತು ದಾಟಿಲ್ಲ.ಅಂದಿನಿಂದಲೇ ಅವನು ಮನಸ್ಸಿನಲ್ಲಿಯೇ ಇವಳನ್ನು ಮೆಚ್ಚಿಕೊಂಡಿದ್ದ.ತಕ್ಕ ಸಮಯ ಬಂದಾಗ ಹೇಳಿದರಾಯಿತು ಎಂದುಕೊಂಡಿದ್ದ.ಆಕೆಗೂ ಅಷ್ಟೇ ಅವನ ನಡತೆ ಸೌಮ್ಯ ಸ್ವಭಾವ ಇಷ್ಟವಾಗಿತ್ತು.ಅವಳಿಗೆ ಒಂಟಿ ಬದುಕಿನಲ್ಲಿ ಒಬ್ಬ ಆತ್ಮೀಯ ಸ್ನೇಹಿತ ಸಿಕ್ಕಂತಾಗಿತ್ತು.
ಒಂದು ದಿನ ವಿನಯ್ ಜೊತೆ ರೆಸ್ಟೋರೆಂಟಲ್ಲಿ ಕುಳಿತು ಕಾಫಿ ಕುಡಿಯುತ್ತಿರಬೇಕಾದರೆ ವಿನಯ್ ತನ್ನ ಮನಸ್ಸಿನಲ್ಲಿರುವುದನ್ನು ಸಂಗೀತಾಳ ಬಳಿ ಧೈರ್ಯ ಮಾಡಿ ಹೇಳಿಯೇ ಬಿಟ್ಟಿದ್ದ.ಇದನ್ನು ಕೇಳಿದ ಆಕೆಗೆ ಒಂದುಕ್ಷಣ ಆಶ್ಚರ್ಯ ಆಘಾತ ಒಮ್ಮೆಗೇ ಉಂಟಾಗಿತ್ತು.ನಾನು ಇಷ್ಟು ದಿನವಾದರೂ ನನ್ನ ಬದುಕಿನ ಹಿನ್ನೆಲೆ ಬಗ್ಗೆ ಅವನ ಬಳಿ ಹೇಳದಿದ್ದುದೇ ತಪ್ಪಾಯಿತೇ?ನಾನೀಗಲೇ ಒಬ್ಬ ವಿಧವೆ,ಅಲ್ಲದೇ ಒಂದು ಮಗುವಿನ ತಾಯಿ,ನನಗೀಗ ಮದುವೆಯೇ!?ಈ ಸಮಾಜವಾದರೂ ನನಗೆ ಏನೆನ್ನಬಹುದು?ಮಿಗಿಲಾಗಿ ಸತ್ಯ ಸಂಗತಿ ತಿಳಿದರೆ ವಿನಯ್ ಕೂಡಾ ಒಪ್ಪಲಾರ.ಆಕೆ ಏನೊಂದು ತೋಚದೆ ಗೊಂದಲಕ್ಕೀಡಾಗಿದ್ದಳು.ಅವಳಲ್ಲಿ ಯೋಚನೆಗಳ ಮಹಾಪೂರವೇ ಎದ್ದಿತ್ತು.ನೈಜ ಸಂಗತಿ ತಿಳಿದರೆ ಈತ ತನ್ನಿಂದ ದೂರಾಗಬಹುದು.ಇವನನ್ನು ಕಳೆದುಕೊಂಡರೆ ಒಬ್ಬ ಆತ್ಮೀಯನನ್ನು ಕಳೆದುಕೊಂಡಂತೆ ಮನದಲ್ಲೇ ಅಂದುಕೊಳ್ಳುತ್ತಾ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ,ಸ್ವಲ್ಪ ಕಾಲಾವಕಾಶ ಕೊಡಿ.ಯೋಚಿಸಿ ನಿರ್ಧರಿಸಿ ಹೇಳುತ್ತೇನೆ ಎಂದಷ್ಟೆ ಹೇಳಿ ಜಾರಿಕೊಂಡಿದ್ದಳು.
ಬಹಳ ದಿನಗಳವರೆಗೆ ಯೋಚನೆ ಮಾಡಿ ತನ್ನ ಬದುಕಿನ ಎಲ್ಲಾ ನಿಜ ಸಂಗತಿಗಳನ್ನು ಇವನ ಬಳಿ ಹೇಳಿ ಅವನಿಂದ ದೂರ ಇರಬೇಕೆಂದುಕೋಂಡಳು. ಅದಕ್ಕಾಗಿ ಒಂದು ದಿನ ವಿನಯನನ್ನು ಕರೆದು "ನೋಡಿ ವಿನಯ್,ನೀವು ನನ್ನಲ್ಲಿ ಅದೇನು ಕಂಡು ಮೆಚ್ಚಿದ್ದೀರೋ ಗೊತ್ತಿಲ್ಲ.ನಾನು ನಿಮ್ಮನ್ನು ಒಳ್ಳೆಯ ಸ್ನೇಹಿತನಂತೆ ಕಂಡಿದ್ದೇನೆ.ಆದರೆ ನಿಮ್ಮನ್ನು ಮದುವೆಯಾಗಿ ನಿಮ್ಮ ಬದುಕಿಗೆ ಬೆಳಕಾಗಿ ಬರುವ ಭಾಗ್ಯವಂತೆ ನಾನಲ್ಲ.ಯಾಕೆಂದರೆ ನಾನೀಗಲೇ ಪತಿಯನ್ನು ಕಳೆದುಕೊಂಡ ನತದೃಷ್ಟೆ.ಒಂದು ಮಗುವಿನ ಜವಾಬ್ದಾರಿಯೂ ನನ್ನ ಮೇಲಿದೆ.ನೀವು ನನ್ನ ಬಗ್ಗೆ ಅದೇನು ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ದೀರೋ ಅದೆಲ್ಲಾ ಸುಳ್ಳು.ಇಷ್ಟು ದಿನ ಸತ್ಯವನ್ನು ಮರೆಮಾಚಿದ್ದಕ್ಕೆ ಕ್ಷಮೆಯಿರಲಿ".ಎಂದು ಉಮ್ಮಳಿಸಿ ಬಂದ ದುಃಖವನ್ನು ಅದುಮುತ್ತಾ ಹೇಳಿದಳು.ಆದರೆ ವಿನಯನೂ ವಿಚಲಿತನಾಗದೆ ಅಷ್ಟೇ ಶಾಂತವಾಗಿ ಹೇಳಿದ,'ನಾನೂ ಕೂಡಾ ಏನೇನೋ ಕನಸು ಕಟ್ಟಿಕೊಂಡಿದ್ದೆ,ಮದುವೆಯಾಗಿ ಹೊಸ ಬದುಕು ರೂಪಿಸಬೇಕೆಂದು ಕೊಂಡಿದ್ದೆ.ಆದರೆ ಎಲ್ಲಾ ಮಣ್ಣುಪಾಲಾಗಿ ಹೋಯಿತು.ಇನ್ನುಈ ಮದುವೆ ಸಂಸಾರದ ಜಂಜಾಟವೇ ಬೇಡ,ಒಂಟಿಯಾಗಿ ಇದ್ದು ಬಿಡೋಣ ಅನ್ನಿಸಿ ಬಿಟ್ಟಿತ್ತು. ಆದರೆ ನಿಮ್ಮನ್ನು ನೋಡಿದಾಗಿನಿಂದ ಆ ಭಾವನೆಯೇ ಬದಲಾಗಿ ಬಿಟ್ಟಿತ್ತು.ಆ ನಿಮ್ಮ ನಗು,ಕಷ್ಟದಲ್ಲೂ ಎದೆಗುಂದದೆ ಸಂಸಾರ ನಿಭಾಯಿಸುವ ಪರಿ ನನಗೊಂದು ಹೊಸ ಹುರುಪು ತಂದುಕೊಟ್ಟಿತು.ನಾನು ನಿಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೇನೆ,ಆದರೆ ನನ್ನ ಬಗ್ಗೆ ಏನು ತಿಳಿದಿದ್ದೀರೋ ಅದು ಸುಳ್ಲು'.ಎಂದಾಗ ಸಂಗೀತಾಳಿಗೆ ಒಂದೂ ಅರ್ಥವಾಗಲಿಲ್ಲ.ಅವನೇ ಮುಂದುವರಿದು"ನಾನೂ ಕೂಡಾ ವಿವಾಹಿತ,ಆದರೆ ವರ್ಷ ಕಳೆಯುವಷ್ಟರಲ್ಲಿ ನಮ್ಮಿಬ್ಬರ ಬಂಧನ ಬಿರುಕು ಬಿಟ್ಟಿತ್ತು.ಇದು ಅವಳಿಗಿಷ್ಟವಿರದಿದ್ದ ಮದುವೆಯೆಂದು ತಿಳಿದಾಗ ತಡವಾಗಿ ಹೋಗಿತ್ತು.ಮದುವೆ ಸಂಸಾರವೆಂದರೆ ಎರಡು ಮನಸುಗಳ ಬೆಸುಗೆ,ಇಲ್ಲದಿದ್ದರೆ ಅದೊಂದು ರೀತಿಯ ಬಂಧನ ಮಾತ್ರ.ಅಲ್ಲಿ ಇಬ್ಬರೂ ಸ್ವತಂತ್ರರು ಎಂದುಕೊಂಡಿರುವವನು ನಾನು.ಕೊನೆಗೊಂದು ದಿನ ಇಬ್ಬರೂ ಬೇರೆ ಬೇರೆಯಾಗಲು ನಿರ್ಧರಿಸಿದೆವು.ಆಕೆ ತಾನು ಇಷ್ಟಪಟ್ಟವನೊಂದಿಗೆ ಸ್ವಚ್ಚಂದವಾಗಿ ಹಾರಿ ಹೋದಳು"ಎಂದಾಗ ಅವನ ಹೃದಯ ಭಾರವಾಗಿತ್ತು.
ಈಗ ಸಂಗೀತಾಳ ಮನಸ್ಸಿನಲ್ಲಿ ವಿನಯನ ಬಗ್ಗೆ ಅನುಕಂಪ ಮೂಡತೊಡಗಿತ್ತು.ಅವನ ತ್ಯಾಗ ಔದಾರ್ಯದ ಬಗ್ಗೆ ಹೆಮ್ಮೆಯೆನಿಸಿತ್ತು.ಆಸರೆಯಿಲ್ಲದ ನನ್ನ ಬದುಕಿನಲ್ಲಿ ಜೊತೆಯಾಗಲು ಬರುತ್ತಿರುವ ಅವನನ್ನು ನಿರಾಕರಿಸುವುದರಲ್ಲಿ ಯಾವುದೇ ಅರ್ಥವಿಲ್ಲ.ವಿನಯನದೂ ತನ್ನಂತೇ ಒಂಟಿ ಬದುಕು,ಆದರೆ ಇನ್ನೊಂದು ಮದುವೆಯಾಗಲು ಇನ್ನೂ ಹುಡುಗಿಯರು ಸಿಗಬಹುದು.ನನ್ನನ್ನೇ ಒಪ್ಪಿಕೊಳ್ಳುವ ಅನಿವಾರ್ಯತೆ ಅವನಿಗೇನಿದೆ?ಬೆಂಗಾಡಾಗಿರುವ ನನ್ನ ಬದುಕಿನಲ್ಲಿ ನೆರಳಾಗುತ್ತಿರುವ ವಿನಯನನ್ನು ಪಡೆಯುತ್ತಿರಬೇಕಾದರೆ ನನ್ನ ಪುಣ್ಯವೇ ಸರಿ.ಇಬ್ಬರದೂ ಒಂದೇ ಮನಸು,ಒಂದೇ ಕನಸು.ಹೀಗಿರುವಾಗ ತಾನು ಅವನ ಕೈ ಹಿಡಿಯುವುದರಲ್ಲಿ ಯಾವುದೇ ತಪ್ಪಿಲ್ಲ.ಯೋಚಿಸಿ ಅವಳೊಂದು ನಿರ್ಧಾರಕ್ಕೆ ಬಂದಿದ್ದಳು.ಪರಸ್ಪರ ಒಪ್ಪಿಗೆಯಿತ್ತು ಇಬ್ಬರೂ ಕೈ ಹಿಡಿದು ನಡೆದು ಬಂದಾಗ ಬಾನಂಗಳದಲ್ಲಿ ಪೂರ್ಣಚಂದಿರ ನಗುತ್ತಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ