ಭಾನುವಾರ, ಆಗಸ್ಟ್ 8, 2010

ಒಂದು ತಿರುವು....

(ಮಂಗಳ ವಾರಪತ್ರಿಕೆ ಯುಗಾದಿ ಸಂಚಿಕೆ 2008ರಲ್ಲಿ ಪ್ರಕಟವಾದ ಕಥೆ)

ಮದುವೆಯಾಗಿ ಇನ್ನೂ ವರ್ಷವೇ ಕಳೆದಿರಲಿಲ್ಲ.ಅಷ್ಟರಲ್ಲಿಯೇ ನಮ್ಮಿಬ್ಬರ ನಡುವೆ ಅಡ್ಡಗೋಡೆ ಮೂಡಿತ್ತು.ಎರಡೂ ದುಡಿವ ಜೀವಗಳು,ಹಾಗಾಗಿ ಮನೆಯ ಜವಾಬ್ದಾರಿಯ ಬಗ್ಗೆ ಇಬ್ಬರಲ್ಲೂ ಗೊಂದಲ ಏರ್ಪಟ್ಟಿತ್ತು.ಸತಿಪತಿಯರಿಬ್ಬರೂ ಸಂಸಾರ ರಥದ ಚಕ್ರಗಳಿದ್ದಂತೆ,ಹೊಂದಿಕೊಂಡು ಹೋದಲ್ಲಿ ಮಾತ್ರ ಸುಖವಿದೆ ಎಂಬುದನ್ನು ತಿಳಿಯದರಷ್ಟು ದಡ್ಡರೇನಲ್ಲ!.ಇಬ್ಬರಿಗೂ ಒಂದು ರೀತಿಯ ಅಹಂ ಬಿಗುಮಾನ.ಅವಳು ನನ್ನನ್ನು ಅರ್ಥಮಾಡಿಕೊಂಡಿಲ್ಲವೋ,ಅಥವಾ ನಾನು ಅವಳನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ ಬಿಟ್ಟಿದ್ದೇನೆಯೇ?,ಹೀಗೆ ಕಳೆದೆರಡು ವಾರಗಳಿಂದ ಮೂಡಿದ್ದ ನಮ್ಮಿಬ್ಬರ ನಡುವಿನ ಕಾರ್ಮೋಡ ಮರೆಯಾಗಿದ್ದು ಆ ರವಿವಾರ ಆಕೆ ತಲೆಸುತ್ತು ಬಂದಂತಾಗಿ ಬಿದ್ದು ಆಸ್ಪತ್ರೆಗೆ ಸೇರಿಸಿದಾಗಲೇ.ವೈದ್ಯರು ಪರೀಕ್ಷಿಸಿ ಗಾಬರಿ ಪಡುವಂತಹ ವಿಷಯವೇನಿಲ್ಲ,ನೀವು ಇನ್ನು ಇಬ್ಬರಲ್ಲ ಮೂವರಾಗುತ್ತಿದ್ದೀರಾ!ಎಂದಾಗ ಇಬ್ಬರ ಮುಖದಲ್ಲೂ ಮಿಂಚು ಮೂಡಿತ್ತು.
ಹೀಗೆ ಒಂದೆರಡು ದಿನ ಕಳೆದಿರಬೇಕು.ಊರಿನಿಂದ ತಂದೆಗೆ ಆರೋಗ್ಯ ಸರಿಯಿಲ್ಲವೆಂದು ತಾಯಿಯೇ ಫೋನ್ ಮಾಡಿದ್ದರು.ಅವರಿಗೆ ಹೀಗೆ ಹುಷಾರಿಲ್ಲದೆ
ಇರುವುದು, ಇದೇನು ಮೊದಲಬಾರಿಯಲ್ಲ.ಆದರೆ ತಾಯಿಯ ಧ್ವನಿಯಲ್ಲಿನ ದುಗುಡ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತಿತ್ತು.ತರಾತುರಿಯಿಂದಲೇ ಹೊರಟು ಬಂದರೂ ನಾನು ಬಂದಿದ್ದು ತಡವಾಗಿ ಹೋಗಿತ್ತು.ತಂದೆಯವರು ಇನ್ನಿಲ್ಲವಾಗಿ ಹೋಗಿದ್ದರು.ಹೀಗೆ ಅವರ ಕರ್ಮಾದಿಗಳನ್ನು ಮುಗಿಸಿ ಮತ್ತೆ ಮರಳಿ ಹೊರಟಾಗ ವಾರ ಕಳೆದಿತ್ತು.ಈಗ ತಾಯಿಯೊಬ್ಬಳೇ ಮನೆಯಲ್ಲಿ,ಅವಳನ್ನು ನೋಡಿಕೊಳ್ಳುವವರಿಲ್ಲ.ಅಕ್ಕ ಅವಳ ಸಂಸಾರದಲ್ಲಿ ಮುಳುಗಿ ಹೋಗಿದ್ದಳು. ನನಗೋ ಇರುವ ಕೆಲಸ ಬಿಟ್ಟು ಹೆಂಡತಿಯೊಡನೆ ಈ ಹಳ್ಳಿಯಲ್ಲಿ ಬಂದು ಸಂಸಾರ ಹೂಡುವ ಹಾಗಿಲ್ಲ,ಯಾಕೆಂದರೆ ಅವಳು ಹುಟ್ಟಿ ಬೆಳೆದದ್ದು ನಗರ ಜೀವನದಲ್ಲಿಯೇ.ಆಗ ಯೋಚನೆಗೆ ಬಂದು"ಈ ಜಾಗವನ್ನು ಯಾರಿಗಾದರೂ ಮಾರಿಬಿಟ್ಟು ನೀನು ನಮ್ಮೊಂದಿಗೆ ಬಾಮ್ಮಾ,ಈ ಹಳ್ಳಿಯಲ್ಲಿದ್ದೇನು ಮಾಡುತ್ತೀ! ನಿನಗೆ ಏನಾದರೂ ಆದಲ್ಲಿ ನಿನ್ನನ್ನು ನೋಡಿಕೊಳ್ಳಲು ಇಲ್ಲಿ ಯಾರಿದ್ದಾರೆ ಹೇಳು? ಅಲ್ಲಿ ನಮ್ಮೊಂದಿಗೆ ಆರಾಮವಾಗಿ ಇರಬಾರದಾ?!" ಎಂದು ತಾಯಿಯಯವರಲ್ಲಿ ವಿಷಯವೆತ್ತಿದಾಗ ಆಕೆಗೆ ದುಃಖ ಒತ್ತರಿಸಿಕೊಂಡು ಬಂದಿತ್ತು.ಅವಳೊಂದಿಗೆ ಇಷ್ಟು ವರ್ಷ ಉಸಿರಾಡಿದ ಆ ಮನೆ ದನ ಕರುಗಳು,ತಾನೇ ನೆಟ್ಟು ಈಗ ತನಗಿಂತಲೂ ಎತ್ತರ ಬೆಳೆದ ಆ ತೆಂಗು ಅಡಿಕೆ ಮರಗಳನ್ನು ಬಿಟ್ಟು ಬರುವುದನ್ನು ಅವಳಿಂದ ನೆನೆಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ.ನನ್ನನ್ನು ಬೇಸರಕ್ಕೀಡುಮಾಡಲಾಗದೆ ಆಕೆ 'ಇನ್ನೊಂದಿಷ್ಟು ದಿನ ಹೋಗಲಿ,ಇವೆಲ್ಲವನ್ನು ಬಿಟ್ಟು ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ,ಯೋಚಿಸಿ ಹೇಳುತ್ತೇನೆ' ಎಂದು ಕಣ್ಣೊರೆಸಿಕೊಂಡಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ.
ಅದೊಂದು ದಿನ ಬೆಳಿಗ್ಗೆ ಎದ್ದವನೇ ಮುಖ ತೊಳೆಯುತ್ತಿರಬೇಕಾದರೆ ಮೊಬೈಲು ರಿಂಗಣಿಸುತ್ತಿತ್ತು.ಅತ್ತ ಅಮ್ಮ'ನಂದೂ..ನಾನು ಕಣೋ ನಿನ್ನಮ್ಮ,ನಾನು ನಿನ್ನಜೊತೆ ಇರ್ಬೇಕೂಂತ ಮನಸ್ಸು ಮಾಡಿದ್ದೀನಿ.ಆದರೆ ಈಮನೆ ತೋಟ ಎಲ್ಲ ಬೇರೆಯವರ ಪಾಲಾಗುವುದು ನನಗಿಷ್ಟವಿಲ್ಲ,ಹೇಗೂ ನಮ್ಮ ಅತ್ತಿಗೆ ಮತ್ತು ಮಕ್ಕಳು ಯಾರದೋ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ.ಸರಿಯಾದ ಕೆಲಸ ಕೂಡಾ ಇಲ್ಲ.ಅವರನ್ನು ಇಲ್ಲಿ ಕರೆದುಕೊಂಡು ಬಂದು ಮನೆಯ ಜವಾಬ್ದಾರಿ ವಹಿಸಿ ಬಿಟ್ಟರೆ ನಮಗೂ ಒಳ್ಳೆಯದಾಗುತ್ತದೆ ಎಂದು ಹೇಳಿದಾಗ ನಾನು ನನ್ನ ಕಿವಿಗಳನ್ನೇ ನಂಬದಾಗಿದ್ದೆ, ಯಾಕೆಂದರೆ ತಾಯಿ ಮತ್ತು ಅತ್ತಿಗೆಯಿಬ್ಬರೂ ಹಾವು ಮುಂಗುಸಿಯಂತೆ ಬದ್ಧವೈರಿಗಳು.ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ನಾವಿನ್ನೂ ಸಣ್ಣವರಿರುವಾಗ ನಮ್ಮ ಮನೆಯಲ್ಲಿನ ಬಡತನ ಕಂಡು ಅತ್ತೆಯವರು ತುಚ್ಛ ಭಾವದಿಂದಲೇ ನೋಡುತ್ತಿದ್ದರು,ಆದರೆ ಅವರ ಗಂಡ ಕುಡಿತ ಜೂಜಿಗೆ ಬಲಿಯಾದ ಮೇಲೆ ಇದ್ದುದೆಲ್ಲವೂ ಸಾಲದಲ್ಲಿ ಕೊಚ್ಚಿ ಹೋಗಿತ್ತು.
ಊರಿಗೆ ಹೋಗಿದ್ದಾಗ ತಾಯಿಯನ್ನು ಕರೆದು ಕೊಂಡು ಬಂದಾಗ ನನಗಿಂತಲೂ ನನ್ನವಳಿಗೇ ಹೆಚ್ಚು ಸಂತೋಷವಾಗಿತ್ತು. ನನ್ನ ತಾಯಿಯದು ಮೃದು ಮನಸ್ಸು ಮತ್ತು ಎಲ್ಲರನ್ನು ಅರ್ಥ ಮಾಡಿಕೊಳ್ಳಬಲ್ಲವಳಾಗಿದ್ದಳು. ಈಗ ಮನೆಗೊಂದು ಬಲ ಬಂದಂತಾಗಿತ್ತು.ನಾವಿಬ್ಬರೂ ಬೆಳಿಗ್ಗೆ ಮನೆ ಬಿಟ್ಟರೆ ಮತ್ತೆ ಗೂಡು ಸೇರುವುದು ಸೂರ್ಯ ಮುಳುಗಿದ ಮೇಲೆ! ಅಲ್ಲಿಯವರೆಗೆ ತಾಯಿಯೊಬ್ಬಳೇ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ದಿನವಿಡೀ ತೋಟ ಗದ್ದೆ ಎಂದು ಕುಣಿದಾಡುತ್ತಿದ್ದ ಆಕೆಗೆ ಇಲ್ಲಿ ಕಟ್ಟಿ ಹಾಕಿದಂತಾಗಿದ್ದು ಮಾತ್ರ ಸುಳ್ಳಲ್ಲ.ಆದರೂ ಬದಲಾದ ಪರಿಸರಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಅವಳಿಗೂ ತಿಳಿದಿತ್ತು. ಆಫೀಸು ಮುಗಿಸಿ ಬರುವಷ್ಟರಲ್ಲಿ ಮನೆಯ ಕೆಲಸ ಮುಗಿಸಿ ಭಾರ ಹಗುರಗೊಳಿಸುತ್ತಿದ್ದ ಆಕೆ ಬರುಬರುತ್ತಾ ದಣಿಯತೊಡಗಿದಳು.ಅಷ್ಟರಲ್ಲಿ ಅವಳ ಕೈಗೆ ಮೊಮ್ಮಗನೂ ಬಂದಿದ್ದ.ಅವನೊಂದಿಗೆ ಆಟವಾಡುತ್ತಾ ಅವನ ಚಾಕರಿ ಮಾಡುತ್ತಾ ತನ್ನ ನೋವು ದಣಿವುಗಳನ್ನು ಮರೆಯುತ್ತಿದ್ದಳು.ಮನಸ್ಸಿಗೆ ವಯಸ್ಸಾಗದಿದ್ದರೂ ದೇಹ ಮುಪ್ಪಾಗತೊಡಗಿತು.ಕೈ ಕಾಲುಗಳು ದಣಿಯತತೊಡಗಿದವು.ಈಗ ಅವಳ ಕೆಲಸಕ್ಕೊಬ್ಬ ಆಳು ಇಡುವಂತಹ ಪರಿಸ್ಥಿತಿ ಬಂದಿತ್ತು,ಆದರೆ ನನ್ನವಳಿಗೆ ಇದು ಸರಿ ಹಿಡಿಸಲಿಲ್ಲ.'ಯಾಕೆ ಬೇಕು ಈ ಉಸಾಬರಿ? ಅವರನ್ನು ಊರಿಗೇ ಕಳಿಸಿಬಿಡಿ.ಇಲ್ಲಾಂದ್ರೆ ಯಾವುದಾದ್ರೂ ವೃದ್ಧಾಶ್ರಮ ನೋಡಿ ಅಲ್ಲಿ ಸೇರಿಸಿ ಬಿಡಿ.ಇಲ್ಲಿ ಇಡೀ ದಿವಸ ನರಳಾಡುತ್ತಿದ್ದರೆ ನೋಡಿಕೊಳ್ಳುವವರು ಯಾರು? ಇವರ ಈ ನರಳಾಟಕ್ಕೆ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ.ಅವರಿಗೆ ಇಲ್ಲಿನ ವಾತಾವರಣ ಹಿಡಿಸುತ್ತಿಲ್ಲ ಅನಿಸುತ್ತೆ.ಮಗುವನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟರಾಯ್ತು ಎಲ್ಲ ಸರಿ ಹೋಗುತ್ತೆ' ಎಂದು ತನ್ನೊಳಗಿನ ವಿಷವನ್ನು ಕಕ್ಕಿದಾಗ ಅತ್ತೆಯನ್ನು ಇವಳು ಅರ್ಥ ಮಾಡಿಕೊಂಡಿದ್ದು ಇಷ್ಟೇನಾ? ತನ್ನ ಪಾಲಿನ ಕೆಲಸ ಆಗುವವರೆಗೆ ಬೆಣ್ಣೆಯಂತೆ ಮಾತಾಡುತ್ತಿದ್ದವಳು ಈಗ ಈ ರೀತಿ ಆಡುವುದನ್ನು ಕೇಳಲಾಗದೆ ಕೆನ್ನೆಗೊಂದು ಛಟೀರನೆ ಬಿಟ್ಟು'ನಾಳೆ ನಿನ್ನ ಗತಿಯೂ ಹೀಗಾದರೆ,ನಿನ್ನ ಮಗನೂ ನಿನ್ನನ್ನು ಹೀಗೇ ನೋಡಿಕೊಂಡರೆ..ಒಮ್ಮೆ ಯೊಚಿಸಿ ನೋಡು' ಎಂದಾಗ ಅವಳಲ್ಲಿ ಅಳು ಬಿಟ್ಟು ಬೇರೆ ಉತ್ತರವಿರಲಿಲ್ಲ.
ಇದ್ದಕ್ಕಿದ್ದಂತೆ ಈಗ್ಗೆ ಕಳೆದೆರಡು ದಿನಗಳಿಂದ ಅವಳಲ್ಲಿ ಆದ ಬದಲಾವಣೆ ಕಂಡು ನನಗೇ ಆಶ್ವರ್ಯವಾಗಿತ್ತು.ಇಷ್ಟರವರೆಗೆ ಅತ್ತೆಯೆಂದರೆ ಬಳಿ ಬರದೆ ಉರಿದು ಬೀಳುತ್ತಿದ್ದ ಆಕೆ ಅತ್ತೆಯ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದಳು.ಅವರಿಗೆ ಸ್ನಾನ ಮಾಡಿಸುವುದರಿಂದ ಹಿಡಿದು,ಊಟ ಉಪಚಾರ ಸ್ವಚ್ಛತೆ ಬಗ್ಗೆ ನಿಗಾ ವಹಿಸುತ್ತಿದ್ದಳು. ಬಿಸಿತಾಗದೆ ಬೆಣ್ಣೆ ಕರಗದು..ಇದರಲ್ಲಿ ಏನೋ ರಹಸ್ಯವಿದೆ,ನಾನಂದ ಮಾತುಗಳೇ ಇವಳಲ್ಲಿ ಬದಲಾವಣೆಗೆ ಕಾರಣವಾದುವೇ?! ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. ಅಂದು ತಮಾಷೆಗಾಗಿಯೇ ಏನು ಅಮ್ಮಾವ್ರಲ್ಲಿ ಈ ತರಹದ ಬದಲಾವಣೆ? ಸೂರ್ಯ ತನ್ನ ದಿಕ್ಕು ಬದಲಾಯಿಸಿಬಿಟ್ಟನೋ ಹೇಗೆ! ಎಂದಾಗ ಆಕೆ ಅಳುಮುಖದಿಂದಲೇ ಒಂದು ಕಾಗದವನ್ನು ಕೈಗಿತ್ತಳು.ತೆರೆದು ನೋಡಿದರೆ ಅದು ಅವಳ ತಾಯಿ ಬರೆದ ಪತ್ರ.ಅದರ ಸಾರಾಂಶ ಹೀಗಿತ್ತು'ಇಲ್ಲಿ ಮಗನ ಜೊತೆ ಸುಖವಾಗಿರುವ ನನ್ನ ಆಸೆ ನುಚ್ಚು ನೂರಾಯ್ತು.ಅವನು ಹೆಂಡತಿಯ ಗುಲಾಮನಾಗಿ ಹೋದ ಮೇಲೆ ನನ್ನನ್ನು ಈ ವೃದ್ಧಾಶ್ರಮಕ್ಕೆ ತಳ್ಳಿಬಿಟ್ಟ. ಅವರಿಗೆ ಬೇಕಿದ್ದುದು ನನ್ನ ದುಡಿತ ಮತ್ತು ನನ್ನ ಆಸ್ತಿ ಮಾತ್ರ.ಇಷ್ಟು ವರ್ಷ ಹೊತ್ತು ಹೆತ್ತು ಬೆಳೆಸಿದ ಮಗನೇ ಕೊನೆಗೆ ತನ್ನ ಪಾಲಿನ ಹೊರೆ ಇಳಿಸಿಕೊಂಡು ಬಿಟ್ಟ.ಯಾರಿದ್ದರೇನು..?ಕೊನೆಗಾಲಕ್ಕೆ ನಮ್ಮಂತಹ ಮುದಿಜೀವಗಳಿಗೆ ಈ ಆಶ್ರಮವೇ ಗತಿ.ನಿನಗೂ ನನ್ನ ವಯಸ್ಸಿನ ಅತ್ತೆ ಇದ್ದಾರೆ. ಅವರನ್ನು ನಿನ್ನ ತಾಯಿಯೆಂದೇ ತಿಳಿದು ನೋಡಿಕೋ.ನನಗೆ ಬಂದಂತಹ ಸ್ಥಿತಿ ಅವರಿಗೆ ಖಂಡಿತ ಬಾರದಿರಲಿ.ನಿನ್ನಿಂದಾಗಿ ಅವರಿಗೆ ಈ ಆಶ್ರಮದ ಸುಖ ಬೇಡ.' ಇಷ್ಟು ಓದಿದಾಗ ಎಲ್ಲ ಅರ್ಥವಾಗತೊಡಗಿತ್ತು.ತನ್ನ ತಾಯಿ ಬರೆದ ಒಂದು ಪತ್ರ ಅವಳ ಮನಸ್ಸನ್ನು ಬದಲಾಯಿಸಿದ್ದು ಕಂಡು ಸಂತೋಷವಾಗಿತ್ತು. ಕಾಗದ ಮಡಚಿ ತಲೆಯೆತ್ತಿ ನೋಡಿದರೆ ಅತ್ತೆಗೆ ಕೈ ತುತ್ತು ನೀಡುತ್ತಿದ್ದುದು ಕೋಣೆಯೊಳಗಿಂದ ಕಾಣುತ್ತಿತ್ತು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ