ಮಂಗಳವಾರ, ನವೆಂಬರ್ 5, 2024

ಕೆಲವು ದೀಪದ ಸಾಲುಗಳು

ಕತ್ತಲು ಎಂದರೆ ಅವ್ಯಕ್ತ ಭಯ

ಬೆಳಕೆಂದರೆ ಭರವಸೆ,ಅಭಯ

ಕತ್ತಲು ಎಂದರೆ ಕರಾಳ

ಬೆಳಕೆಂದರೆ ನಿರಾಳ

ಕತ್ತಲು ಎಂದೊಡನೆ ನೀರವ ಮೌನ

ಬೆಳಕೆಂದರೆ ಹೊಸ ಆಶಾ ಕಿರಣ

******

ಅಂಧಕಾರದ ಇರುಳಿನಲ್ಲಿ

ದೀಪ ಬೆಳಕ ತೋರುವವರು

ಇರುವರು ಬೆರಳೆಣಿಕೆಯಲ್ಲಿ

ಜೀವನದಲ್ಲಿ ನೆನಪಿಟ್ಟುಕೊಳ್ಳಿ

 ಬದುಕ ಸುಟ್ಟು ಬಿಡಲು

ಬತ್ತಿಯಿಡುವವರು

ಕೊಳ್ಳಿಯಿಡುವವರೇ ಹೆಚ್ಚು ಇಲ್ಲಿ!!

*****

ಇಲ್ಲಿ ಎಲ್ಲವೂ ನಿಜವಲ್ಲ

ಅವರವರ ಭಾವಕ್ಕೆ 

ಅವರವರ ದೃಷ್ಟಿಗೆ

ಸುಟ್ಟು ಬೂದಿಯಾಗಿಸುವ

ಕೆನ್ನಾಲಿಗೆಯ ಬೆಂಕಿಯ ಜ್ವಾಲೆ

ಹೊಳೆಯುವ ಬೆಳಕಿನಂತೆ

ದೂರದಿಂದ ಈ ಕಣ್ಣಿನ ದೃಷ್ಟಿಗೆ..!

*****

ಕಂಡದ್ದೆಲ್ಲವೂ ಪಡೆವ ಬಯಕೆ

ದುರಾಸೆ,ದುರಾಲೋಚನೆಗಳೇ

ಸುಟ್ಟು ಬಿಡುವುದು ನಮ್ಮನ್ನು

ಬೇಕಿದ್ದರೆ ನೋಡಿ..

ಬೆಳಕ ಕಂಡೊಡನೆ ದೀಪಕ್ಕೆ ಮುತ್ತಿಟ್ಟು 

ಸುಟ್ಟು ಸತ್ತು ಬಿಡುವ ಪತಂಗವನ್ನು !!

*****

ಗೆಳತೀ ನೀ ಹಚ್ಚಿಟ್ಟು 

ಹೋದೆಯಲ್ಲಾ ಪ್ರೀತಿ ಹಣತೆ 

ಹೃದಯದಲ್ಲಿ 

ನನಗೀಗ ಬಾಳಲ್ಲಿ 

ನಿತ್ಯ ದೀಪಾವಳಿ..!

******

ಹುಡುಗೀ...

ಈ ಉರಿವ ಹಣತೆ

ಈ ಸಾಲು ದೀಪ

ಎಲ್ಲ ನಮಗೆ ಯಾಕೆ ಬೇಕು?

ನಿತ್ಯ ಹೀಗೇ..

ಇದ್ದರೆ ಸಾಕು

ಮನೆ ಮನ ಬೆಳಗಲು

ನಿನ್ನ ಕಣ್ಣ ಬೆಳಕು..!

******

ಒಂದಷ್ಟು ದೀಪ ಹಚ್ಚಲು

ಮೂಡಿತು ಬೆಳಕು

ಮನೆಯ ಸುತ್ತಲೂ

ಆಗೊಮ್ಮೆ ಕಣ್ಣು ಮುಚ್ಚಲು

ಎಲ್ಲೆಲ್ಲೂ ಕತ್ತಲು !

ಅರಿವಾಯಿತು ಸತ್ಯ

ಮನೆಯಲಿದ್ದರಷ್ಟೆ ಸಾಲದು ಬೆಳಕು

ನಮ್ಮ ಮನದಲ್ಲಿರಬೇಕು !

*****

ಬೇರೊಬ್ಬರ ಒಳಿತನ್ನು ಕಂಡು  

ಉರಿಯುವ ಬದಲು

ಕತ್ತಲಲ್ಲಿದ್ದವರ ಬದುಕಲ್ಲಿ

ಮೊದಲು

ನಮ್ಮಿಂದ ಒಂದಿಷ್ಟು 

ಬೆಳಕಾದರೆ ಅಷ್ಟೇ ಸಾಕು..!

******

ಎಲ್ಲಿಂದಲೋ ದೂರದಿಂದ

ಆ ಸೂರ್ಯ ಚಂದ್ರ

ಪ್ರತಿಫಲವಿಲ್ಲದೆ 

ನೀಡುವರು ಭೂಮಿಗೆ ಬೆಳಕು

ಇಲ್ಲಿ ನಮ್ಮೊಡನಿದ್ದವರೇ 

ಕಾಯುವರು ಕತ್ತಲಾಗಲು

ನಮ್ಮ ಬದುಕು.

*******

ಉರಿವ ಬೆಂಕಿಯಲ್ಲಿ

ಚಳಿಯ ಕಾಯಿಸುವರು

ಬೇಳೆ ಬೇಯಿಸುವರು ಕೆಲವರು

ಹಚ್ಚಿ ದ್ವೇಷ ಸಂಶಯದ ಕಿಡಿ

ಕಿಚ್ಚು ಹೆಚ್ಚುವ ಬದಲಿಗೆ

ಬೆಳಕಾಗಲಿ ಕತ್ತಲಲ್ಲಿ

ಒಂದು ಹಣತೆ ಹಚ್ಚಿ ಬಿಡಿ.

*****

ಬೆಳಕಿನ ಕವಿತೆಗಳು

 

ಒಡಲಲ್ಲಿ ಬಚ್ಚಿಟ್ಟ ದಾರ

ನನ್ನನ್ನೇ ಸುಟ್ಟಿದ್ದು ಏನಕ್ಕೆ?

ಕೊನೆಗೂ ಸತ್ಯ ತಿಳಿಯಲಿಲ್ಲ 

ಕರಗಿ ನೀರಾಗಿ ಬಿದ್ದಿದ್ದ ಮೇಣಕ್ಕೆ !

****

ತಾನು ಹೊತ್ತಿ ಉರಿದು

ಬೆಳಕನಿತ್ತರೂ ಊರಿಗೆಲ್ಲ

ದಾರಿ ತೋರುವರಿಲ್ಲ ದೀಪಕ್ಕೆ

ಕಾಲಬುಡದಲ್ಲೇ ಕತ್ತಲು

ಯಾವ ಪಾಪಕ್ಕೆ.?

****

 ಗೆಳತಿ ನೀ ಬಂದೆ ಬಾಳಲ್ಲಿ

ಮೂಡಿತ್ತು ಹೊಸ ಮಿಂಚು

ಬೆಳಕಾಗುವಷ್ಟರಲ್ಲಿ ಬರಸಿಡಿಲು 

ಬದುಕು ಸುಟ್ಟು ಕರಕಲು

ತಿಳಿಯಲಿಲ್ಲ ನಿನ್ನ ಸಂಚು..

****

ನೂರು ದೀಪದ ಬೆಳಕ ಕಂಡೆ

ಪ್ರಿಯೆ ನಿನ್ನ ಕಣ್ಣ ನೋಟದಲ್ಲಿ

ಹಚ್ಚಬೇಕಿಲ್ಲ ಈಗ ಹೆಚ್ಚು ಹಣತೆ 

ನಿತ್ಯ ದೀಪಾವಳಿ  ನನಗೆ ನೀನಿದ್ದಲ್ಲಿ !

****

ಬದುಕನ್ನೇ

ಸುಡಬಹುದು ಇಡೀ

ಬೆಳಕಾಗಬೇಕಿದ್ದ

ಒಂದು ಸಣ್ಣ ಕಿಡಿ

ಬತ್ತಿಯಿಡುವ ಮುನ್ನ

ಮಾತು ನೆನಪಿನಲ್ಲಿಡಿ !!

****

ಮಂಗಳವಾರ, ಜುಲೈ 5, 2022

ಕವನ

 ಮಳೆ ಮತ್ತು ನಾನು


ಆಫೀಸಿನ ಕಿಟಕಿಯಿಂದ 

ನೋಡಿದರೆ ಹೊರಗೆ

ಋತುವಿನ ಮೊದಲ ಮಳೆಗೆ

ಕಪ್ಪಡರಿದ ಮೋಡದ 

ಮಿಂಚಿನ ನಡುವೆ

ಸಾಗಿ ಬರುತ್ತಿತ್ತು ಹನಿಗಳ ಮೆರವಣಿಗೆ


ಹುಡುಗನೊಬ್ಬ ಓಡಿದ 

ನನ್ನನ್ನು ದಾಟಿ

ಆಟವಾಡಲು ಮಳೆಯಲ್ಲಿ ನೆನೆದು

ತಡೆಯಿತು ನನ್ನ ವಯಸ್ಸು ಹಿರಿತನ 

ಅವನ ಕೈಯನ್ನು ಹಿಡಿದೆಳೆದು


ಮಳೆ ಹಾಗೂ ನಾನು 

ಇಬ್ಬರ ನಡುವೆ

ಒಂದು ರೀತಿಯ 

ಗೋಡೆ ಅಡ್ಡವಾಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ.


ಒಂದೊಂದು ಮಳೆಹನಿ ಬಂದು

ಗಾಜಿನ ಕಿಟಕಿಗೆ ಪಟಪಟನೆ ಬಡಿಯುತ್ತಿತ್ತು..

ನಾವಿಬ್ಬರೂ ಜೊತೆ ಸೇರಿ ಆಡುತ್ತಿದ್ದೆವು

ಬಹುಶಃ ಅದಕ್ಕಾಗಿ 

ಈಗ ನನ್ನ ಕರೆಯುತ್ತಿತ್ತು

ನಾವು ಸಣ್ಣವರಿದ್ದೆವು 

ಮಾತು ದೊಡ್ಡದಾಗಿರುತ್ತಿತ್ತು

ಈಗಿನಂತೆ ಬೇಗ ಮನೆ ಸೇರುವ 

ತುರ್ತು ಯಾರಿಗಿತ್ತು?

 

ಬಾನಂಚಲಿ ಹೊಳೆವ ಮಿಂಚು 

ಕಾಣಲು ಕಣ್ಣು ತವಕಿಸುತಿತ್ತು

ಈಗ ಯಾಕೋ ಭಯ ತರಿಸುತ್ತಿತ್ತು

ಮಳೆಯೆಂದರೆ ಒಂಥರಾ ಹಾಯೆನಿಸುತಿತ್ತು

ಈಗ ಒಮ್ಮೆ ನಿಂತರೆ ಸಾಕೆನಿಸುತ್ತಿತ್ತು


ತುಂಬಿದೆ ಅದರಲ್ಲಿ ಸುತ್ತಲಿನ ಕೊಚ್ಚೆ ಕೆಸರು..

ಮುಟ್ಟಿದರೆ ಕೆಟ್ಟ ಹೆಸರು..

ದೂರ ಸರಿದು ನಿಲ್ಲುವ ಹಾಗಿದೆ..

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ


ಕುಣಿದು ಕುಪ್ಪಳಿಸುತಿದ್ದ ನೀರಲ್ಲಿ

ಈಗ ಕ್ರಿಮಿ ಕೀಟಗಳೇ ಕಾಣುತ್ತಿವೆ

ನನ್ನ ಬಗ್ಗೆಯಾದರೂ ಚಿಂತೆಯಿಲ್ಲ, 

ಲ್ಯಾಪ್‌ಟಾಪ್ ಒದ್ದೆಯಾಗುವ 

ಭಯ ಕಾಡುತ್ತಿದೆ.


ಮಳೆಯೆಂದರೆ ಬಿಸಿ ಬಿಸಿ ಚಹಾ 

ತಿಂಡಿಯ ಘಮದೊಂದಿಗೆ 

ಉಲ್ಲಾಸ ಉತ್ಸಾಹವಿರುತ್ತಿತ್ತು

ಒಂದಷ್ಟು ನೆನಪುಗಳ ಕೊಟ್ಟು

ಮರಳಿ ಸಾಗುತ್ತಿತ್ತು..


ಬೆಳೆಯುತ್ತ  ಹೋದಂತೆ ಆ ಕ್ಷಣಗಳು 

ನಮ್ಮ ನಡುವೆ ಎಲ್ಲೋ 

ಕಳೆದು ಹೋಗಿದೆ

ನನ್ನ ಬಾಲ್ಯದ ಮಳೆಯೂ 

ಬೆಳೆದು ದೊಡ್ಡದಾಗಿದೆ..!!


ಮಂಗಳವಾರ, ಮೇ 26, 2020

ಲಾಕ್ ಡೌನ್ ಕವಿತೆಗಳು-2

ಸತ್ತು ಮಲಗಿದೆ
ನಿರ್ಜೀವ ರಸ್ತೆ
ಅಲ್ಲಿ ಗಿಜಿಗುಡುವ ಸದ್ದಿಲ್ಲ!
ನೆನಪಿಸಿದಂತಿದೆ..
ಹೊರಬರಬೇಡಿ ಯಾರೂ
ರೋಗಕ್ಕೆ ಮದ್ದಿಲ್ಲ!!
****
ಲೋಕದ ಭಾರ 
ತಮ್ಮದೇ ತಲೆಯ 
ಮೇಲೆ ಹೊತ್ತಂತೆ
ನಮ್ಮಿಂದಲೇ ದಿನ ಬೆಳಗು
ಎಂಬಂತೆ 
ತಿರುಗುತ್ತಿದ್ದವರಿಗೆ ಈಗ  
ತಿಂದುಂಡು ಹೊರಳಾಡಿ
ದಿನ ಕಳೆಯುವುದು 
ಹೇಗೆಂಬ  ಚಿಂತೆ !!
****
ಕಂಡಾಗ ಅನಿಸಿದ್ದು ..
ಯಾವಾಗಲೂ
ಮಾನವೀಯತೆಯೇ
ಮಿಗಿಲು
ನಮ್ಮ ಹೊಟ್ಟೆ 
ಕೂಡಾ ತುಂಬುವುದು
ಇನ್ನೊಬ್ಬರ ಹಸಿವು ನೀಗಲು
****
ಎಲ್ಲ ಕಾಲಕ್ಕೆ
ಅನಿವಾರ್ಯವಲ್ಲ
ಕೂಡಿಟ್ಟ ಗಳಿಕೆ ಸಂಪತ್ತು
ನಿಜವಾದ 
ನೆಮ್ಮದಿಯ ಗುಟ್ಟು 
ಒಂದಿಷ್ಟು ಪುರುಸೊತ್ತು 
ಮತ್ತು
ನಮ್ಮವರೊಡನೆ ಕಳೆದ ಹೊತ್ತು
****
ದೂರ ತೀರ ಸೆಳೆತಕೆ
ಮಾರು ಹೋಗಿ
ನಮ್ಮತನವ ಮಾರಿ,
ಮರಳಿ ಬರುವಾಗ
ಬಿಟ್ಟಿ ಬಂದಿದ್ದು ಈ ಮಾರಿ..!!
****
ಮೊದಲು ಎಲ್ಲೆಡೆ
ಮಲಿನವಾಗಿತ್ತು
ಮೂಗು ಮುಚ್ಚಿಕೊಳ್ಳಬೇಕಿತ್ತು
ಆದರೆ 
ಈಗ ಸುತ್ತ ಸ್ವಚ್ಛವಾಗಿದೆ
ಮನುಷ್ಯ
ಮುಖ ತೋರಿಸದಂತಾಗಿದೆ!!
****

ಸೋಮವಾರ, ಮೇ 25, 2020

ಲಾಕ್ ಡೌನ್ ಕವಿತೆಗಳು


ಇಷ್ಟು ದಿನ ಕಂಡು ಕೇಳದ 
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ  ಮನುಜ 
ತಾನೇ ಸುತ್ತಲೂ ದಿಗ್ಬಂಧನ
****
ಈ ಭೂಮಿಗೊಬ್ಬನೇ ಒಡೆಯ 
ಅಂದುಕೊಂಡಿದ್ದು ಸುಳ್ಳು  
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ 
ಎಲ್ಲ ಜೀವರಾಶಿಗೆ ಇಲ್ಲೂ
***
ಹೊರಗೆ ಹೊರಟಾಗ ಕಂಡಿದ್ದು 
ದೌಲತ್ತು ಸಂಪತ್ತು 
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು 
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು 
ಕಂಡಾಗ ಸರಿವರು 
ಮಾರು ದೂರ 
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ 
ಅಸ್ಪ್ರಶ್ಯರು ಒಂಥರಾ...!!


ಶುಕ್ರವಾರ, ಜುಲೈ 18, 2014

ಮತ್ತೆ ಮೂರು ಹನಿಗಳು......

ನಮ್ಮ ಮನೆಯ
ವಾತಾವರಣವೇ ಹೀಗೆ..
ಬದಲಾಗುವುದು ಆಗಾಗ
ಖುಷಿಯಲಿದ್ದರೆ ನನ್ನಾಕೆ
ಮನೆ ತುಂಬಾ ಮಧುರ ರಸರಾಗ
ಮುನಿಸಿಕೊಂಡರೆ
ಮಾತಿಲ್ಲ ಕಥೆಯಿಲ್ಲ ಬಾಯಿಗೆ ಬೀಗ
ಅತ್ತರೆ ಕಣ್ಣೀರೇ ಸಾಕು
ಅಲ್ಲಿ ಧುಮ್ಮಿಕ್ಕುವ ಜೋಗ...:)

     ***********

ಇತ್ತೀಚೆಗೆ ರಾಜ್ಯದಲ್ಲಿ
ಮಹಿಳೆಯರ ಮೇಲೆ
ದೌರ್ಜನ್ಯ ಅತ್ಯಾಚಾರಗಳದೇ
ಸುದ್ದಿ ಅಲ್ಲಲ್ಲಿ..
ಇಂತಹವರನ್ನು ಸಾಯಿಸಬೇಕು
ಕಂಡ ಕಂಡಲ್ಲಿ ಹೊಡೆದು
ಕಲ್ಲಲ್ಲಿ...!

    ***********

ಕಣ್ಣೀರು ಸುರಿಸುತ್ತಿರುವೆನೆಂದು
ಭಾವಿಸದಿರು
ನಿನ್ನನ್ನೇ ನೆನೆದು
ಕೊಡೆ ಮರೆತು ಹೋದ ತಪ್ಪಿಗೆ
ಏನು ಹೇಳಲಿ......
ಮೂಗು ಕಟ್ಟಿದೆ ಗೆಳತಿ
ಮೊನ್ನೆ
ಮಳೆಯಲ್ಲಿ ನೆನೆದು..:)


   ************

ಶನಿವಾರ, ನವೆಂಬರ್ 24, 2012

ಕೊಲೆಗಾರ !!


(ಅನುವಾದಿತ ಕಥೆ)  
ಇಂಗ್ಲೀಷ್ ಮೂಲ:ರವಿ ಲೋಬೊ
                                          ಕೊಲೆಗಾರ !!
ವೇಗವಾಗಿ ಚಲಿಸುತ್ತಿದ್ದ ಆ ಕಾರಿಗೆ ಮಹಿಳೆಯೊಬ್ಬಳು ಕೈ ಚಾಚುತ್ತಿದ್ದುದನ್ನು ಕಂಡ ಆತ ಕಾರನ್ನು ನಿಧಾನಗೊಳಿಸಿದ.ಆಕೆ ಬಹುತೇಕ ರಸ್ತೆ ಮಧ್ಯೆ ಬಂದು ನಿಂತಿದ್ದಳು.ಚಿಕ್ಕ ಕಪ್ಪು ಸ್ಕರ್ಟ್ ಬಿಳಿ ಟಾಪ್ ಧರಿಸಿದ್ದ ಅವಳು, ಅದು ಕತ್ತಲಾದುದರಿಂದ ಕಾರಿನ ಹೆಡ್ ಲೈಟಿನ ಬೆಳಕಿನಿಂದ ತಪ್ಪಿಸಲೆಂದೇನೋ ಸನ್ ಗ್ಲಾಸ್ ಧರಿಸಿದ್ದಳು.
ಕಾರು ನಿಂತಿತು.
ಆಕೆ ಬಾಗಿಲ ಬಳಿ ಬಂದು"ನನಗೆ ಈ ಸಿಟಿಯಲ್ಲಿ ಒಂದು ಸುತ್ತು ಡ್ರಾಪ್ ಕೊಡ್ತೀರಾ.. ಪ್ಲೀಸ್"?ನಯವಾಗಿ ಕೇಳಿದಳು. ಆತ ಮುಂದಿನ ಬಾಗಿಲು ತೆರೆದ.
"ನಾನು ಕಡೇ ಬಸ್ ಮಿಸ್ ಮಾಡ್ಕೊಂಡೆ .ಥ್ಯಾಂಕ್ ಗಾಡ್ ! ಪುಣ್ಯಕ್ಕೆ ನೀನು ಈ ದಾರಿಯಲ್ಲಿ ಬಂದೆ, ನಾನು ಬಹಳ ಹೊತ್ತಿನಿಂದ ಕಾಯುತ್ತಿದ್ದೆ."ಆಕೆ ಸನ್ ಗ್ಲಾಸ್ ತೆಗೆದು ಕವರಿನಲ್ಲಿ ಜೋಪಾನವಾಗಿಡುತ್ತಾ ಹೇಳಿದಳು .
"ಹೌದು ಈ ಕಾಡಿನ ಪ್ರದೇಶದಲ್ಲಿ ತುಸು ಬೇಗನೇ ಕತ್ತಲಾಗಿಬಿಡುತ್ತೆ"ಆತ ಅಂದ.
"ತುಂಬಾ ಚಳಿಯಿದೆ ಹೊರಗಡೆ," ಆಕೆ ಅಂಗೈ ಉಜ್ಜುತ್ತಾ ಹೇಳಿದಳು.
ಕಾರು ಈಗ ವೇಗ ಪಡೆಯುತ್ತಿತ್ತು.
"ಅಪರಿಚಿತರ ಜೊತೆ ಈ ತರಹ ತಡ ರಾತ್ರಿ ಡ್ರಾಪ್ ಕೇಳಲು ಭಯವಾಗುವುದಿಲ್ಲವೇ.ಅಪರಾತ್ರಿಯಲ್ಲಿ ಕೆಲವು ನಿಗೂಢ ಘಟನೆಗಳು ಈ ದಾರಿಯಲ್ಲಿ ನಡೆಯುತ್ತಿರುತ್ತವೆ ಅದಕ್ಕಂದೆ."ಆತ ಪ್ರಶ್ನಿಸಿದ
"ನಿಜವಾಗಿಯೂ! ನಾನೂ ಭಯಗೊಂಡಿದ್ದೆ, ಈ ಕಾಡಿನಲ್ಲಿ ಹೀಗೆ ಇಡೀ ರಾತ್ರಿ ಕಳೆಯುವುದನ್ನು ನನ್ನಿಂದ ಊಹಿಸಲೂ ಕೂಡಾ ಸಾಧ್ಯವಾಗುತ್ತಿಲ್ಲ.ನಿನ್ನ ಕಾರಿನ ಬೆಳಕು ಕಂಡಾಗಲೇ ,ಈ ಅವಕಾಶ ಮಿಸ್ ಮಾಡ್ಕೋ ಬಾರದು ಅಂತ ನಿರ್ಧರಿಸಿದೆ..,ನಾನು ಬಸ್ ಮಿಸ್ ಮಾಡ್ಕೊಂಡಿದ್ದು, ನೀನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ ಕಟುಕನ ಕೈಗೆ….ಇದೊಂಥರಾ ಕಾಕತಾಳೀಯ.."
ಕಾರಿನ ಡಾಶ್ ಬೋರ್ಡಿನ ಮೀಟರ್ ಲೈಟ್, ಹಾಗೂ ಹೆಡ್ ಲೈಟಿನ ಹೊರತು ಎಲ್ಲೆಡೆ ಕತ್ತಲಾವರಿಸಿತ್ತು. ಉದ್ದುದ್ದ ಮರಗಳು ರಸ್ತೆಯ ಒಂದು ಬದಿಗೆ ಒರಗಿ ನಿಂತಿದ್ದರೆ ಇನ್ನೊಂದೆಡೆ ಪ್ರಪಾತದಂತಿತ್ತು. ನೋಡು ನೋಡುತ್ತಿದ್ದಂತೆ ಕಾರು ನಗರದತ್ತ ಬಂದಿತ್ತು.ದೊಡ್ಡ ದೊಡ್ಡ ಬೀದಿದೀಪಗಳು ಆ ಕತ್ತಲೊಂದಿಗೆ ಇನ್ನೂ ಹೋರಾಡುತ್ತಿದ್ದವು.
"ನಾನಿಲ್ಲೇ ಇಳಿದು ಬಿಡುತ್ತೇನೆ" ಅಂದಳು ಆಕೆ.
ಕಾರು ರಸ್ತೆ ಬದಿಯಲ್ಲಿ ಬಂದು ನಿಂತಿತು.
ಆಕೆ ಆತನಿಗೊಂದು ಥ್ಯಾಂಕ್ಸ್ ಹೇಳಿ ಡೋರ್ ತೆರೆಯಲು ಪ್ರಯತ್ನಿಸಿದಳು."ಯಾವಾಗಲೂ ಹೀಗೆ.. ನನಗೆ ಬಾಗಿಲು ತೆರೆಯಲಾಗುವುದೇ ಇಲ್ಲ.ಅವು ನನ್ನ ತಬ್ಬಿಬ್ಬು ಮಾಡಿಬಿಡುತ್ತವೆ".ಅನ್ನುತ್ತಾ ಮತ್ತೆ ಯತ್ನಿಸಿದಳು.
"ಅದು ಲಾಕ್ ಆಗಿಬಿಟ್ಟಿದೆ" ಎಂದ ಆತ
"ನನಗೋಸ್ಕರ ಸ್ವಲ್ಪ ತೆರೀತೀರಾ…"
ಆತ ಪ್ರತಿಕ್ರಿಯಿಸಲಿಲ್ಲ,
ಸ್ವಲ್ಪ ಹೊತ್ತಿನ ಬಳಿಕ ಉತ್ತರಿಸಿದ, "ಕೆಲವೊಮ್ಮೆ ಅಚ್ಚರಿಗಳು ನಡೆದು ಬಿಡುತ್ತವೆ. ನೀನು ಬಸ್ ಮಿಸ್ ಮಾಡ್ಕೊಂಡಿದ್ದು ನಾನು ಈ ದಾರಿಯಲ್ಲಿ ಬಂದಿದ್ದು…ಏನೋ ಅಂತಾರಲ್ಲ...ನೀನೇ ಈಗ ಅಂದಂತೆ ಕಟುಕನ ಕೈಗೆ…....ಹೌದು ನಾನೊಬ್ಬ ಕೊಲೆಗಡುಕ"
ಆಕೆ ವಿಷಣ್ಣ ನಗೆ ನಕ್ಕಳು.
"ನಾನೇನು ಟಿ ವಿ ಯೊಳಗಿದ್ದೇನೆಯೇ,..ಅಥವಾ ಕ್ಯಾಮರ ಮುಂದೆ ನಿಂತಿದ್ದೇನಾ..ಇಂತಹ ಡೈಲಾಗ್ ಕೇಳಲು",
ಆತ ಕಪಾಳಕ್ಕೊಂದು ಬಾರಿಸಿದ.ಆ ರಭಸಕ್ಕೆ ಆಕೆಯ ತಲೆ ಬಾಗಿಲಿಗೆ ಬಡಿದಿತ್ತು.ಕಣ್ಣುಗಳು ನೋವಿನಿಂದ ನೀರು ತುಂಬಿಕೊಂಡು ಕೆಂಪಗಾಗಿದ್ದುವು.
"ನನ್ನ ಮಾತನ್ನು ಗಮನವಿಟ್ಟು ಕೇಳು, ಜಾಸ್ತಿ ಮಾತಡಬೇಡ. ಸುಮ್ನೆ ಇದ್ರೆ ಒಳ್ಳೆಯದು..ಯಾವುದೇ ಹುಚ್ಚು ಪ್ರಯತ್ನ ಪಟ್ಟರೆ, ಏನಾದ್ರೂ ಚಾಲಾಕಿ ತೋರಿಸಿದ್ರೆ ನಿನ್ನನ್ನು ಉಳಿಸಲ್ಲ ಅಷ್ಟೇ.. "
ಈಗ ಕಾರು ಯೂ ಟರ್ನ್ ಪಡೆದು,ಕಾಡಿನ ಒಂದು ಒಂಟಿ ರಸ್ತೆ ನಡುವೆ ವೇಗವಾಗಿ ಸಾಗುತ್ತಿತ್ತು. ಆಕೆ ಈಗ ಸಾವರಿಸಿಕೊಂಡು ಕರ್ಚೀಫಿನಿಂದ ಮೂಗೊರೆಸಿಕೊಂಡಳು.
"ಪ್ಲೀಸ್ ..ನನ್ನ ಕೊಲ್ಬೇಡ .."
ಆತ ಏನೂ ಪ್ರತಿಕ್ರಿಯಿಸಲಿಲ್ಲ….
ಆತ ಸುಂದರ ಸುಧೃಢ ಯುವಕನಾಗಿದ್ದ,.ಆತ ಕೈಗೆ ಕಪ್ಪು ಗ್ಲೌಸ್ ಹಾಕಿದ್ದನ್ನು ಆಕೆ ಗಮನಿಸಿದಳು.ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದುಕೊಂಡಳು.ಕೂಗಿ ಅರಚೋಣವೆಂದರೆ ಯಾರೊಬ್ಬರೂ ಕಾಣುತ್ತಿರಲಿಲ್ಲ.. ಆಕೆಗೆ ಏನೋ ಹೊಳೆದಂತಾಗಿ...
"ನಿನಗೆಷ್ಟು ಹಣ ಬೇಕು…ಹೇಳು "
ಮೌನ ಮುಂದುವರಿದಿತ್ತು..
"ನನ್ನನ್ನು ಬಿಟ್ಟು ಬಿಡು, ಯಾರ ಬಳಿಯೂ ಹೇಳಲ್ಲ, ನಾನು ನೀನು ಭೇಟಿಯಾಗದವರ ರೀತಿ ಇದ್ದು ಬಿಡುತ್ತೇನೆ.ನಾನು ಯಾವುದಕ್ಕೂ ಸಿಧ್ಧ..ಅಸಹಾಯಕತೆಯ ನಡುವೆ ಹೇಳಿದಳು.
ಆತನ ತೊಡೆಯ ಮೇಲೆ ಕೈಯಿಡುತ್ತಾ, ಮೆಲ್ಲಗೆ ತಟ್ಟುತ್ತಾ "ನಿನಗಿದು ಇಷ್ಟಾನಾ…"?? ಕೇಳಿದಳು
"ತೆಗೀ ಕೈನಾ.,ಇಲ್ಲಾಂದ್ರೆ ಇನ್ನೊಂದು ಬಾರಿಸ್ತೀನಿ.."
ತಕ್ಷಣ ಕೈ ಹಿಂತೆಗೆದು ಕೊಂಡಳು
ಕಾರು ಬೆಟ್ಟದ ರಸ್ತೆಯ ನಡುವೆ ಹಾವಿನಂತೆ ಚಲಿಸುತ್ತಿತ್ತು.
"ಈ ಪ್ರಪಂಚದಲ್ಲಿ ಸುಖಕ್ಕಾಗಿ ಸೆಕ್ಸ್ ಗಿಂತಲೂ ಬೇಕಾದಷ್ಟು ವಿಷಯಗಳಿವೆ.ಯೋಚನೆ ಮಾಡು....ಈ ಮನುಷ್ಯರು ಯಾಕೆ ಕೊಲೆ ಮಾಡುತ್ತಾರೆ"??
ಆಕೆ ಪ್ರತಿಕ್ರಿಯಿಸಲಿಲ್ಲ.ಆದರೆ ಪ್ರಶ್ನೆ ಮರುಕಳಿಸಿದಾಗ ಆಕೆಗೆ ಏನೂ ತೋಚಲಿಲ್ಲ.ಆತ ಇನ್ನೊಮ್ಮೆ ಕಪಾಳಕ್ಕೆ ಬಾರಿಸಿದ್ದ.
"ನೀನು ಯೋಚಿಸಿಲ್ಲ ಉತ್ತರಿಸಿಲ್ಲವೆಂದರೆ ನಿನಗೆ ನನ್ನ ಬಗ್ಗೆ ಆಸಕ್ತಿಯಿಲ್ಲವೆಂದಾಯ್ತು, ಮತ್ತು ನಾನು ನಿನ್ನಲ್ಲಿ ಆಸಕ್ತಿ ಕಳೆದುಕೊಂಡ್ರೆ, ನನ್ನಲ್ಲಿ ನಿನಗೆ ಯಾವುದೇ ಬೆಲೆಯಿಲ್ಲ.ನಾನೀಗ ನಿನ್ನ ಕೊಂದು ಆ ಪ್ರಪಾತಕ್ಕೆಸೆಯಬಹುದು.
ಆಕೆ ಭಯಗೊಂಡಳು, "ಪ್ಲೀಸ್…"ಬೇಡತೊಡಗಿದಳು
"ಹಾಗಾದ್ರೆ ಹೇಳು…ಯಾಕೆ ಕೊಲೆ ಮಾಡ್ತಾರೆ"??
ಆಕೆ ಸ್ವಲ್ಪ ಸಮಯದ ಬಳಿಕ, "ಪ್ರತೀಕಾರಕ್ಕಾಗಿ" ಅಂದಳು
"ಆಮೇಲೆ.."?
"ಮತ್ಸರ, ಜಗಳ, ಕೋಮು ಗಲಭೆ,ಹಣ, ಹೆಣ್ಣು, ಆಸ್ತಿ….".
ನೀನೇನು ಟೀಚರಾ..???
"ಹೌದು "…
"ನೀವು ಹೀಗೇನೆ…ನಿಮ್ಮ ಬಳಿ ಎಲ್ಲದಕ್ಕೂ ಉತ್ತರವಿರುತ್ತೆ. ಆದ್ರೆ ಇದು ಬಹುಶಃ ತಪ್ಪಾಗಿರಬಹುದು, ಯಾರಾದ್ರೂ ಪ್ರಶ್ನೆ ಕೇಳಿದ್ರೂ ಸಾಕು ನೀವು ಪುಸ್ತಕದ ರೆಡಿಮೇಡ್ ಉತ್ತರದೊಂದಿಗೆ ರೆಡಿಯಾಗಿರ್ತೀರಾ.".
ಅಷ್ಟರಲ್ಲಿ ಯಾವುದೋ ಸಣ್ಣ ಪ್ರಾಣಿ, ತೋಳ ವೆನಿಸುತ್ತೆ ರಸ್ತೆ ಮಧ್ಯೆ ಬರಲು ಪ್ರಯತ್ನಿಸಿ, ಕಾರಿನ ಹೆಡ್ ಲೈಟಿನ ಬೆಳಕಿಗೆ ದಿಕ್ಕು ತೋಚದಂತಾಗಿ ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡು ಹೋಯ್ತು..
"ನೀನು ಯೋಚನೆ ಮಾಡುತ್ತಿಲ್ಲ, ಹೋಗ್ಲಿ ಬಿಡು ಮನುಷ್ಯನ ಯಾವ ನಡವಳಿಕೆ ಮತ್ತೆ ಮತ್ತೆ ಕೊಲೆ ಮಾಡಿಸುತ್ತೆ??? ಆತ ಕೇಳಿದ
"ಹಣ "ಉತ್ತರಿಸಿದಳು ಆಕೆ
"ಅದಕ್ಕೆ ಹಲವಾರು ಸುಲಭ ದಾರಿಗಳಿವೆ. ಕೊಲೆ ಮಾಡುವ ಅಗತ್ಯವಿಲ್ಲ "
"ಬೇರೆ ಕಾರಣ ಗೊತ್ತಿಲ್ಲ…"ನರ್ವಸ್ ಆಗಿ ಹೇಳಿದಳು
"ಸಂತೋಷಕ್ಕಾಗಿ…..ನೀನು ಏನಂತೀ"…???
"ಏನಂದೆ.."..? ಆಕೆ ಪ್ರಶ್ನಿಸಿದಳು
"ಸಂತೋಷಕ್ಕಾಗಿ ಕೊಲೆ ಮಾಡಬಹುದಾ…"? ಮರು ಪ್ರಶ್ನಿಸಿದ
"ಇಲ್ಲ .. "
"ಪರಸ್ಪರರ ನಡುವಿನ ವ್ಯತ್ಯಾಸಕ್ಕಾಗಿ .."??
"ವ್ಯತ್ಯಾಸಕ್ಕಾಗಿ …"????
"ಹೌದು , ಭಾವನೆಗಳೇ ಇಲ್ಲದ ಮನುಷ್ಯ ಮಾತ್ರ ಕೊಲೆ ಮಾಡುತ್ತಾನೆ. ಆತನಿಗೆ ಅದೊಂದು ದಿನ ನಿತ್ಯದ ಚಟುವಟಿಕೆ.ಟೀ ಕುಡಿದಂತೆ ಅಥವಾ ಬ್ಯಾಂಕಿನಿಂದ ಚೆಕ್ ಬುಕ್ ಆರ್ಡರ್ ಮಾಡಿದಂತೆ.."
ಅದು ಹೇಗೆ ಸಾಧ್ಯ…??
ನೀನು ಸಸ್ಯಾಹಾರಿ ನಾ..? ಕೇಳಿದ ಆತ
ಏನು….?
ನೀನು ಚಿಕನ್ ತಿನ್ನುತ್ತೀಯಾ?ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಒಮ್ಮೆಯಾದ್ರೂ ಯೋಚಿಸಿದ್ದೀಯಾ. ನೀನು ಮಾಡೋದು ಸರೀನಾ ಅಂತ..?.?
ಕಾರಣ ಸಿಗದೆ ಆಕೆ ಮಾತನಾಡದಾದಳು.
"ಇನ್ನು ಕೆಲವರು ವಿಚಿತ್ರ ಕಾರಣಗಳಿಗಾಗಿ ಕೊಲೆ ಮಾಡ್ತಾರೆ. ನೀನು ಡೆವಿಲ್ ಫೋಟೋಗ್ರಾಫರ್ ಬಗ್ಗೆ ಕೇಳಿದ್ದೀಯಾ.."?
"ಇಲ್ಲ.."
"ದಶಕಗಳ ಹಿಂದೆ ಆತ ವರ್ಷಕ್ಕೆ 18 ಕೊಲೆ ಮಾಡಿದ್ದ.ಅದರಲ್ಲಿ ಬಹುತೇಕ ಎಲ್ಲರೂ ಗಂಡಸರೇ ಆಗಿದ್ದರು. ಅದು ಅನಗತ್ಯ ಬಿಡು…ಅದರ ಹೊರತಾಗಿ ಕೊಲೆಗಾರ ಅಪರಾಧ ಕೃತ್ಯಗಳ ಕೆಲವು ಚಿತ್ರಗಳನ್ನು ಅಲ್ಲಿ ಬಿಟ್ಟು ಹೋಗುತ್ತಿದ್ದ. ಕೊಲೆಯಾದ ನತದೃಷ್ಟರೂ ಅಮಾಯಕರೇನಲ್ಲ, ಹಲವಾರು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು.ಆತ ಕೆಲವು ದಿನಗಳವರೆಗೆ ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ. ಅವರ ಕೃತ್ಯಗಳ ಬಗ್ಗೆ ಚಿತ್ರ ಸಂಗ್ರಹಿಸುತ್ತಿದ್ದ, ಸಾಕ್ಷ್ಯಗಳೆಲ್ಲ ಸಿಕ್ಕ ಮೇಲೆಯೇ ಆತ ಕೊಲೆಮಾಡುತ್ತಿದ್ದ.ನಂತರ ಅಲ್ಲಿ ಆ ಚಿತ್ರಗಳನ್ನು ಬಿಟ್ಟು ಹೋಗುತ್ತಿದ್ದ. ಯಾರೊಬ್ಬರಿಗೂ ಅವನ ಹೆಸರು ಗೊತ್ತಿಲ್ಲ. ಆತ 'ಡೆವಿಲ್ ಫೋಟೊಗ್ರಾಫರ್' ಎಂದೇ ಪರಿಚಿತ.ಆತನನ್ನು ಎಲ್ಲರೂ'ಡೆವಿಲ್' ಎಂದೇ ಕರೆಯುತ್ತಿದ್ದರು.
"ಒಂದು ರೀತಿ ನೋಡಿದರೆ ಆತ ಶಿಕ್ಷೆ ನೀಡುವವನಂತೆ ಕಾಣುತ್ತಾನೆ".ಆಕೆ ಅಂದಳು.
"ಹೌದು ಆರಂಭಕ್ಕೆ ನಾನೂ ಅದೇ ರೀತಿ ಅಂದುಕೊಂಡಿದ್ದೆ. ಆದರೆ ಆತ ಯಾಕೆ ನಿಲ್ಲಿಸಿದ, ದಶಕಗಳಿಂದ ಯಾಕೆ ಮೌನವಾಗಿದ್ದಾನೆ ಎಂದೇ ತಿಳಿಯುತ್ತಿಲ್ಲ"
"ಏನು ಆಯಿತು ಅವನಿಗೆ."ಪ್ರಶ್ನಿಸಿದಳು
"ಆತ ತಣ್ಣಗಾದ, ನಾನು ಅವನ ಕೊಲೆಗಳ ಬಗ್ಗೆ ತಿಳಿಕೊಂಡಿದ್ದೇನೆ.ಆತ ಒಬ್ಬ ಕಲೆಗಾರ ಕೂಡಾ,ಆತ ಕೊಲೆ ಮಾಡುವ ಮುನ್ನ ಅವರ ಮನವೊಲಿಸುತ್ತಿದ್ದ.ಕೊಲೆಯಾಗುವ ಸಂದರ್ಭದಲ್ಲಿ ಯಾವುದೇ ಪ್ರಯತ್ನ ಪಟ್ಟ ಬಲತ್ಕಾರ ಪಟ್ಟ ಕುರುಹುಗಳಿರುವುದಿಲ್ಲ.ನತದೃಷ್ಟರು ಸುಲಭವಾಗಿ ಸಾವನ್ನು ಒಪ್ಪಿಕೊಳ್ಳುತ್ತಿದ್ದರು.ಆತ ಒಬ್ಬ ಪರ್ಫೆಕ್ಷನಿಸ್ಟ್. ಪೋಲೀಸರಿಗೂ ಹಿಡಿಯಲು ಸಾಧ್ಯವಿಲ್ಲ.ಆದರೆ ದೇವರೇ ಬಲ್ಲ,ಎಷ್ಟು ಕಾಲ ಹೀಗೆ ಇರಬಲ್ಲ..ಆದರೆ ಈ ಸಯನೈಡ್ ಕೊಲೆಗಳ ರೀತಿಯೇ ಬೇರೆ......"
"ಹೌದು ನಾನೂ ಕೂಡಾ ಈ ಬಗ್ಗೆ ಓದಿದ್ದೆ.ಸಯನೈಡ್ ಕೊಲೆ ಅಂದ್ರೆ ಆ ಕೊಲೆಗಾರ ಅಮಾಯಕ ಹುಡುಗಿಯರಿಗೆ ವರದಕ್ಷಿಣೆಯಿಲ್ಲದೆ ಮದುವೆಗೆ ಒಪ್ಪಿಸಿ, ಮನವೊಲಿಸಿ ದಂಪತಿಗಳಂತೆ ಲಾಡ್ಜ್ ಒಂದರಲ್ಲ್ಲಿ ರೂಂ ಮಾಡಿ ರಾತ್ರಿ ಕಳೆದು, ಮರುದಿನ ಆಕೆ ಗರ್ಭವತಿಯಾಗದಂತೆ ಮಾತ್ರೆ ತೆಗೆದುಕೊಳ್ಳಲು ಹೇಳುತ್ತಿದ್ದ.ಆ ಮಾತ್ರೆಯಲ್ಲಿ ಸಯನೈಡ್ ಇರುತ್ತಿತ್ತು"
"ಒಳ್ಳೆಯದು..ನಿನಗ್ಗೊತ್ತಾ ಆತ ಎಷ್ಟು ಕೊಲೆ ಮಾಡಿದ್ದಾನೆ.".?
"ಹತ್ತು ಅಥವಾ ಹದಿನೈದು ಇರಬಹುದು."
"ಪೋಲೀಸರು ಆರೆಸ್ಟ್ ಮಾಡಿದಾಗ ಹೇಳಿದ್ದ ೧೭ ಜನ, ಆದರೆ ವಾರದೊಳಗೆ ಅದು ೨೦ ಕ್ಕೇರಿತ್ತು. ಏನಾದ್ರೂ ಆಗಲಿ.., ನನಗೆ ಈ ಸಯನೈಡ್ ಕಿಲ್ಲರ್ ಬಗ್ಗೆ ಆಸಕ್ತಿಯಿಲ್ಲ.ಅವನಿಗೆ ಕೊಲೆ ಮಾಡುವ ರೀತಿಯೇ ಸರಿಯಿಲ್ಲ.ಆತನಿಗೆ ಬೇಕಾಗಿದ್ದು ಕೇವಲ ಹಣ ಮತ್ತು ಸೆಕ್ಸ್.ಆತನದು ಅದೇ ಸೂತ್ರ.ಪೋಲೀಸರು ಹಿಡಿಯುವವರಗೂ ಅಲ್ಲೇ ಸುತ್ತುತ್ತಿದ್ದ, ಈಗ ಇಂಟರೆಸ್ಟಿಂಗ್ ಭಾಗಕ್ಕೆ ಬರೋಣ..."ಆತ ಅಂದ
ಆಕೆ ದಿಟ್ಟಿಸಿ ನೋಡುತ್ತಿದ್ದಳು...
"ಇತ್ತೀಚೆಗೆ ಕಳೆದ ತಿಂಗಳಲ್ಲಿ ಮೂರು ಕೊಲೆಗಳು ನಡೆದವು. ಆ ಮೂರೂ ಕೊಲೆಗಳ ಭಾವಚಿತ್ರಗಳಿವೆ.
"ಡೆವಿಲ್ ಮತ್ತೆ ಬಂದಿರಬೇಕು".ಆಕೆ ಎದೆಬಡಿತ ಜೋರಾಗಿತ್ತು.
"ಹೌದು ದಶಕಗಳ ನಂತರ, ನಿನಗ್ಗೊತ್ತ ಇಲ್ಲಿ ಏನಾಗುತ್ತಿದೆ ಅಂತ.."?
"ಇಲ್ಲ "
"ಸ್ಥಾನಕ್ಕಾಗಿ ಪೈಪೋಟಿ ಅಷ್ಟೇ,ನಾನು ಡೆವಿಲ್ ಬಗ್ಗೆ ಅರ್ಥಮಾಡಿಕೊಂಡೆ,ಹತ್ತು ವರ್ಷಗಳಲ್ಲಿ ಆತ 18 ಕೊಲೆ ಮಾಡಿ ಮೊದಲ ಸ್ಥಾನದಲ್ಲಿದ್ದ.ಆದರೆ ಇದ್ದಕ್ಕಿದ್ದಂತೆ 20ಕ್ಕೇರುವಲ್ಲಿ ಮತ್ತೊಬ್ಬರು ಪೈಪೋಟಿ ನೀಡುವುದನ್ನು ಕಂಡ.ಅದಕ್ಕಾಗಿ 3 ಕೊಲೆ ಮಾಡಿ 21ಕ್ಕೇರಿಸಿಕೊಂಡ.ನೀನು ಯೋಚನೆಯನ್ನು ನಿಲ್ಲಿಸುವುದು ಒಳ್ಳೆಯದು.ಇಲ್ಲಿ ನೋ ಮನಿ, ನೋ ಸೆಕ್ಸ್..ಪ್ರತೀಕಾರವಿಲ್ಲ.ಕೇವಲ ಸ್ಥಾನಕ್ಕಾಗಿ ನಂಬರ್ ವನ್ ಪಟ್ಟಕ್ಕಾಗಿ.."
"ಇದೆಲ್ಲಾ ನನಗ್ಯಾಕೆ ಹೇಳ್ತಿದ್ದೀಯಾ.."??
"ಯಾಕಂದ್ರೆ ನಾನೂ ಈ ರೇಸ್ ನಲ್ಲಿದ್ದೇನೆ.."
"ಅಂದ್ರೆ ಅದರ ಅರ್ಥ."?
"ಕಳೆದ ೫ ವರ್ಷಗಳಲ್ಲಿ ೬೦ ಮಂದಿ ಕಾಣೆಯಾಗಿದ್ದಾರೆ.ಕೇವಲ ೨೦ ಜನ ಸಯನೈಡ್ ಗೆ ಬಲಿಯಾದವರು.ಹಾಗಾದ್ರೆ ಉಳಿದವರು.."?
"ನೀನು.."?
"ಇಲ್ಲ, ಕಳೆದ ತಿಂಗಳವರೆಗೆ ೨೧, ನಾನು ಮತ್ತೆ ಡೆವಿಲ್ ಸಮನಾಗಿದ್ದೆವು,ಈಗ ಏನಾಗುತ್ತೆ ಗೊತ್ತಾ.."?
"ಡೆವಿಲ್ ಮೊದಲನೇ ಸ್ಥಾನಕ್ಕಾಗಿ ಮತ್ತೆ ಕೊಲೆ ಮಾಡಲು ಶುರು ಮಾಡ್ತಾನೆ."
"ಖಂಡಿತವಾಗಿಯೂ" ಆತ ಅಂದ.
" ಇಬ್ಬರಲ್ಲೊಬ್ಬರು ನಿಲ್ಲಿಸುವವರೆಗೆ ಈ ಕೊಲೆ ಸರಣಿ ಮತ್ತೆ ಮುಂದುವರಿಯುತ್ತೆ.ಆ ಡೆವಿಲ್ ನ ಕೊಲ್ಲುವುದು ಬಹಳ ಆಸಕ್ತಿದಾಯಕವಾಗಿರಬಹುದು.ನಾನು ಪ್ರತಿಕ್ಷಣವನ್ನು ಆಸ್ವಾದಿಸುತ್ತ ಕಾದು ನೋಡಬೇಕೆಂದಿದ್ದೇನೆ.ಅವನ ಮುಂದಿನ ನಡೆ ಏನಿರಬಹುದು ? ತುಂಬಾ ಕಾತರನಾಗಿದ್ದೇನೆ."
"ನಿಜವಾಗಿಯೂ.., ಟಾಪ್ ವನ್ ಆಗಲು ಅವನು ಯೋಚಿಸುತ್ತಿದ್ದಾನೆ ,ಬಹುಶಃ ಅವನಿಗೆ ನಿನ್ನ ಬಗ್ಗೆ ಆಸಕ್ತಿಯಿರಬಹುದು."ಅಂದಳು ಆಕೆ
"ಈಗ ನೀನು ಯೋಚಿಸಿ ಮಾತಾಡುತ್ತಿದ್ದೀಯಾ "ಅಂದ ಅವಳ ಭುಜ ತಟ್ಟುತ್ತಾ..
"ಅವನು ಕೈಗೆ ಸಿಗಲ್ಲ ಅಂತ ಹೇಳ್ತಿಯಾ"?
"ಬಹುಶಃ ಅವನು ಪೋಲೀಸ್ ಆಗಿದ್ದರೆ..."ಅಂದಳು
"ಅದು ಅನುಮಾನ."
"ಅಥವಾ ಅವನು ಯಾರಾದರೂ ಸಾಮಾನ್ಯ ಮನುಷ್ಯನಾಗಿರಬಹುದು, ಯಾವುದಾದರೂ ಉದ್ಯೋಗ ಮಾಡುತ್ತಿರಬಹುದು.ಬ್ಯಾಂಕರ್, ಪೋಸ್ಟ್ ಮ್ಯಾನ್ ಅಥವಾ......."
"ಅಥವಾ ಏನು.."??ಪ್ರಶ್ನಿಸಿದ
"ಒಂದು ರೀತಿ ಕಲೆಗಾರನೇ ಇರಬಹುದು, ಆಗಾಗ ತನ್ನ ವೇಷ ಬದಲಾಯಿಸುತ್ತಿರಬಹುದು."
"ನಡೀ..ಇಲ್ಲಿಂದ.."ಅಬ್ಬರಿಸಿದ
"ನಿನ್ನ ಹತ್ರ ಬಂದೂಕು ಇದೆಯಾ? ಪ್ಲೀಸ್ ಶೂಟ್ ಮಾಡ್ಬೇಡ..." ಆಕೆ ಚೀರಿದಳು
"ನಿಲ್ಲಿಸು.. ನನ್ನ ಹತ್ರ ಗನ್ ಇಲ್ಲ.ನನಗೆ ನಿನ್ನ ಕೊಲ್ಲಬೇಕಾಗಿಲ್ಲ.,ನಾವು ಡೆವಿಲ್ ಬಗ್ಗೆ ಮಾತಾಡೋಣ.."
"ನೀನಂದಿದ್ದೇ ಸರಿ.ಇಲ್ಲಿ ಟಾಪ್ ವನ್ ಗಾಗಿ ಪೈಪೋಟಿ ಇದೆ.ಪ್ರಾಯಶಃ ಅವನು ನಿನ್ನನ್ನು ಫಾಲೋ ಮಾಡುತ್ತಿರಬಹುದು, ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿರಬಹುದು."ಅಂದಳು ಆಕೆ
ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು
"ನಿನ್ನ ನಿತ್ಯದ ಚಟುವಟಿಕೆಗಳ ಬಗ್ಗೆ ಅವನಿಗೆ ಬೇಕಾದಷ್ಟು ಮಾಹಿತಿ ಇದೆ ಅನ್ನಿಸುತ್ತೆ, ನೀನು ಕೆಲಸ ಮಾಡುವ ರೀತಿ, ನೀನು ಜನರನ್ನು ಆರಿಸುವ ರೀತಿ, ನಿನ್ನ ಬೇಕು ಬೇಡಗಳ ಬಗ್ಗೆ, ಹೀಗೆ ಪೂರ್ತಿ ಚಿತ್ರಣವೇ ಇರಬಹುದು ಅವನ ಬಳಿ."
"ಆಮೇಲೆ...."
"ನನ್ನದೊಂದು ಸಿದ್ಧಾಂತ ಇದೆ.."
"ಸಿದ್ಧಾಂತ..."?? ತಾಳ್ಮೆ ಕಳೆದುಕೊಂಡು ಅರಚಿದ
"ಆ ಡೆವಿಲ್ ಮನುಷ್ಯನೇ ಆಗಿರದಿದ್ದರೆ.."?
"ಅಂದ್ರೆ ನೀನು ಹೇಳುವುದು..ಆತ ದೆವ್ವ ಅಥವಾ ಬೇರೇನೋ..??
"ನಿನ್ನನ್ನೂ ಸೇರಿಸಿ ಎಲ್ಲರೂ ಆತ ಒಬ್ಬ ಪುರುಷನೆಂದೇ ತಿಳಿದು ಕಾಯುತ್ತಿದ್ದಾರೆ.ಆದ್ರೆ ಆ ಡೆವಿಲ್ ಒಬ್ಬ ಹೆಣ್ಣಾಗಿದ್ದರೆ? ಇತ್ತ ಪೋಲೀಸರು ಕೂಡಾ ಹೊಂಚು ಹಾಕಿ ಕಾಯುತ್ತಿದ್ದರೆ, ಆಕೆ ಸುಲಭವಾಗಿ ಕೊಲೆ ಮಾಡಿ ಮುಗಿಸುತ್ತಿದ್ದಾಳೆ.ಅವಳಿಗೆ ನಿನ್ನ ಬಗ್ಗೆ ಗೊತ್ತು ,ನಿನ್ನ ಬಗ್ಗೆ ಮಾಹಿತಿಯಿದೆ.ನೀನು ಕೊಲೆ ಮಾಡುವಾಗ ತೆಗೆದ ಚಿತ್ರಗಳು ಅವಳ ಬಳಿ ಇವೆ".
ಆಕೆ ಕನಸಲ್ಲಿ ಮಾತಾಡುತ್ತಿರುವಂತೆ ಭಾಸವಾಯಿತು ಅವನಿಗೆ.
"ಇನ್ನು ಕಾಯುವುದು ಸಾಧ್ಯವಿಲ್ಲ ಎಂದು ತಿಳಿದ ಆಕೆ ಕೊನೆಗೂ ನಿರೀಕ್ಷೆಯ ಆ ಕಡೇ ದಿನವನ್ನು ನಿರ್ಧರಿಸಿದಳು..ಬಲೆ ಬೀಸುವವಳಂತೆ ನಿನ್ನ ದಾರಿಗಾಗಿ ಕಾದು ಕುಳಿತಳು, ಮತ್ತೆ ನಿನ್ನೊಂದಿಗೆ ಪ್ರಯಾಣಕ್ಕಾಗಿ ಒಂದು ಅವಕಾಶ ಕೇಳಿದಳು."
ಕಾರು ಸಡನ್ನಾಗಿ ನಿಂತಿತು, ಈಗ ಆತ ಹೆದರಿ ಬಿಟ್ಟಿದ್ದ.
ಹೊರಗಡೆ ನೋಡಿದರೆ ಒಂದೆಡೆ ಪ್ರಪಾತ ಕಾಣುತ್ತಿತ್ತು.ಇನ್ನೊಂದೆಡೆ ಮರಗಳು ಅಲ್ಲಾಡುವಂತೆ ಜೋರಾಗಿ ಗಾಳಿ ಬೀಸುತ್ತಿತ್ತು.ಆದರೆ ಕಾರಿನ ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದ ಒಳಗೆ ಅದರ ಅನುಭವವಾಗುತ್ತಿರಲಿಲ್ಲ.
ಕೆಲ ಹೊತ್ತು ಅಲ್ಲಿ ಮೌನ ಆವರಿಸಿತ್ತು.
ಅಷ್ಟರಲ್ಲಿ ಆಕೆ ಅವನ ಕೆನ್ನೆಗೆ ಗುರಿಯಿಡುತ್ತಾ "ಕೆಲವು ನಿಮಿಷಗಳ ಹಿಂದೆ ನಿನ್ನ ಬಳಿ ಈಗ ಗನ್ ಇಲ್ಲ ಎಂಬುದನ್ನು ನೀನೇ ಸುಲಭವಾಗಿ ಒಪ್ಪಿಕೊಂಡು ಬಿಟ್ಟೆ,ಆದರೆ ನನ್ನ ಈ ಸಣ್ಣ ಹ್ಯಾಂಡ್ ಬ್ಯಾಗ್ ನಲ್ಲಿ ಅದು ಈಗಲೂ ಇದೆ..!"ಅನ್ನುವಾಗ ಆಕೆಯ ಮುಖದಲ್ಲಿ ನಗುವಿತ್ತು..!
                   
                 *******************************




ಶುಕ್ರವಾರ, ನವೆಂಬರ್ 16, 2012

ದುರಂತ

 ಹೀಗೊಂದು ಕಥೆ....
     ಕಳೆದ ಎರಡು ವಾರಗಳಿಂದ ಶ್ಯಾಮರಾಯರ ಮನಸ್ಸಿಗೆ ಸಮಾಧಾನವಿರಲಿಲ್ಲ.ರಾತ್ರಿ ಮಲಗಿದರೆ ನಿದ್ದೆಯೂ ಹತ್ತುತ್ತಿರಲಿಲ್ಲ.ಎರಡು ವಾರದ ಹಿಂದೆ ನಡೆದ ಆ ಘಟನೆ ಕಣ್ಣ ಮುಂದೆ ಬಂದು ಅವರ ಕೋಪ ನೆತ್ತಿಗೇರುವಂತೆ ಮಾಡುತ್ತಿತ್ತು.ಆ ಘಟನೆ ಬೇರೆ ಯಾರಿಗೂ ಸಂಬಂಧಿಸಿದ್ದರೂ ಈ ಮಟ್ಟದ ಸುದ್ದಿಯಾಗುತ್ತಿರಲಿಲ್ಲವೇನೋ!ಆದರೆ ಶ್ಯಾಮರಾಯರೇ ಅದರಲ್ಲಿ ಭಾಗಿಯಾಗಿದ್ದಾರೆಂದ ಮೇಲೆ ಊರಿಡೀ ಪ್ರಚಾರದ ತೀವ್ರ ಸ್ವರೂಪ ಪಡೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.ತಾನು ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಘನತೆಗೆ ಒಂದೆಡೆ ಕುತ್ತು ಬಂದಿದ್ದರೆ,ಇನ್ನೊಂದೆಡೆ ತನಗೊಬ್ಬ ವೈರಿ ಹುಟ್ಟಿಬಿಟ್ಟನಲ್ಲಾ! ಎಂಬ ದಿಗಿಲು.ಇವೆರಡೂ ರಾಯರನ್ನು ನಿದ್ದೆಗೆಡುವಂತೆ ಮಾಡಿದ್ದವು.ಈವರೆಗೆ ತಾನು ಮಾಡಿದ್ದೇ ಸರಿ,ನಡೆದಿದ್ದೇ ದಾರಿ ಎಂಬಂತಿದ್ದ ರಾಯರ ಬದುಕಿನಲ್ಲಿ ಆ ಘಟನೆ ದೊಡ್ಡ ಮಟ್ಟದ ಆಘಾತವನ್ನೇ ನೀಡಿತ್ತು.ನಿನ್ನೆ ಅದಕ್ಕೊಂದು ತೆರೆ ಎಳೆದ ಮೇಲೆಯೇ ಅವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು.
   ಸುಮಾರು ನೂರೈವತ್ತು ಇನ್ನೂರು ಮನೆಗಳಿರುವ ಆ ಊರಿನಲ್ಲಿ ಇವರದೇ ದೊಡ್ಡ ಮನೆತನ. ಮನೆಯಲ್ಲಿ ಪುಟ್ಟ ಸಂಸಾರ ಒಬ್ಬಳೇ ಮಗಳು.ಎಲ್ಲರೂ ತಿಳಿದಂತೆ ಆತ ದೊಡ್ಡ ದೈವ ಭಕ್ತ.ತಾನು ಏನು ಮಾಡಿದರೂ ಅದೆಲ್ಲಾ ತಾನು ನಂಬಿಕೊಂಡು ಬಂದಿರುವ ಕಲ್ಕುಡನ ಕಾರ್ಣಿಕದ ಬಲ ಎನ್ನುತ್ತಿದ್ದರು.ಹೀಗೆ ಎಲ್ಲ ಕೆಲಸಗಳನ್ನು ದೈವವನ್ನೇ ಮುಂದಿರಿಸಿಕೊಂಡೇ ಮುಗಿಸುತ್ತಾ ಬರುತ್ತಿದ್ದರು.ಹೀಗಾಗಿ ಇಡೀ ಊರಿಗೆ ಶ್ಯಾಮರಾಯರ ಹೆಸರೆತ್ತಿದರೆ ಸಾಕು,ಒಂದು ರೀತಿಯ ಭಯ,ಅವರ ದೈವವೆಂದರೆ ಇನ್ನೂ ಎಲ್ಲಿಲ್ಲದ ಭಯ.ಅವರನ್ನು ಇದುವರೆಗೆ ಎದುರು ಹಾಕಿಕೊಂಡವರಿಲ್ಲ.ಎದುರಾಡಿದವರು ಬದುಕಿ ಉಳಿದಿಲ್ಲ.ಅವರ ತಂಟೆಗೆ ಹೋದರೆ ಅದರ ಪರಿಣಾಮವನ್ನು ಊಹಿಸಿಯೇ ಜನ ಸುಮ್ಮನಾಗುತ್ತಿದ್ದರು. ಅಷ್ಟು ಜೋರಿನ ರಾಯರು ಹಾಗೂ ಅವರ ದೈವ.ಅದರಲ್ಲಿ ಎರಡು ಮಾತಿಲ್ಲ.ಇದು ಇಡೀ ಊರೇ ನಂಬಿದ ವಿಚಾರ.ಪೆಟ್ಟೊಂದು ತುಂಡೆರಡು !!ಎಂಬ ರೀತಿ, ಹೀಗೆ ಒಂದು ರೀತಿಯ ಹಿಡಿತವನ್ನೇ ಆ ಊರಲ್ಲಿ ಸಾಧಿಸಿಕೊಂಡು ಬಂದಿದ್ದರು.
    ಈಗಲೂ ರಾಯರು ಮಾತಾಡುತ್ತಿರಬೇಕಾದರೆ,ಕೆಲವು ವರ್ಷಗಳ ಹಿಂದೆ ತಮ್ಮ ಹಸು ಪಕ್ಕದ ಅಚ್ಚಪ್ಪನ ಗದ್ದೆಯ ನೇಜಿ ತಿನ್ನುತ್ತಿದ್ದಾಗ ಅವನ ಕಲ್ಲಿನ ಏಟು ಬಿದ್ದು ಹಸು ಸತ್ತಿದ್ದು,ಕೊನೆಗೂ ಒಂದು ದಿನ ಆತ ಬಿದ್ದು ತಲೆ ಒಡೆದು ಅವನಿಗೆ ಹುಚ್ಚು ಹಿಡಿಯುವಂತಾಗಿದ್ದು.ಹಾಗೆಯೇ ಮೂಲೆಮನೆಯ ಚೀಂಕ್ರ ಕೂಡಾ ತಮ್ಮ ಮನೆಯ ತೋಟದ ಕಂಗಿನಿಂದ ಅಡಿಕೆ ಕದಿಯಲು ಹೋಗಿ ಮರದಿಂದ ಬಿದ್ದು ಸೊಂಟ ಮುರಿದು ನೆಗರುತ್ತಿರುವುದನ್ನು ಕಂಡು ತಮ್ಮ ದೈವದ ಕಾರಣಿಕದ ಬಗ್ಗೆ ಊರಿಡೀ ಹೇಳಿಕೊಂಡು ಮೀಸೆ ತಿರುವಿಕೊಳ್ಳುತ್ತಾರೆ.ಆದರೆ ಅವರೆಲ್ಲಾ ಈ ಸ್ಥಿತಿಗೆ ಬರಲು ಕಾರಣ ರಾಯರ ಪೆಟ್ಟೇ ಹೊರತು ಭೂತದ್ದಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.
      ಆ ಘಟನೆ ನಡೆದು ಇಂದಿಗೆ ಸುಮಾರು ಮೂರು ವಾರಗಳಾಗುತ್ತ ಬಂದಿವೆ.ನನ್ನ ನಾಶಕ್ಕೆ ಗುರಿಯಿಟ್ಟವನನ್ನು ಹಿಡಿದು ತಕ್ಕ ಶಿಕ್ಷೆ ವಿಧಿಸಿದರೆ ನಿನಗೆ ನೇಮ ಕೊಡುತ್ತೇನೆ ಎಂದು ಎಂದಿನಂತೆ ಎಲ್ಲರ ಮುಂದೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆ ಹೊತ್ತಿದ್ದರು..ಹೀಗೆ ಅವರು ಅಂದುಕೊಂಡಿದ್ದೆಲ್ಲಾ ಸುಸೂತ್ರವಾಗಿ ನಡೆದಿತ್ತು.ಹೀಗೆ ಅವರ ಮನೆಯಲ್ಲಿ ಅಂದು ಕಲ್ಕುಡನ ನೇಮಕ್ಕೆ ತಯಾರಿ ನಡೆಯುತಿತ್ತು.ಕೊಂಬು ವಾದ್ಯ ತೆಂಬರೆ ಪಾಡ್ದನದ ದನಿ ಹೊಸ ಅಲೌಕಿಕ ಪ್ರಪಂಚವನ್ನೇ ಸೃಷ್ಟಿಸಿದಂತಿತ್ತು.ಸೇರಿದ್ದ ಮಂದಿಯ ಗದ್ದಲ ಜಾತ್ರೆಯನ್ನು ಹೋಲುವಂತಿತ್ತು.ಆದರೆ ನೆರೆಯ ನೀಲಕ್ಕನಿಗೆ ಈ ಗೌಜಿ ಗದ್ದಲ ಕಂಡೊಡನೆ ಚೂರಿಯಿಂದ ಇರಿದಂತಾಗುತ್ತಿತ್ತು,ತನ್ನ ಕಣ್ಣುಗಳೇ ಕಿತ್ತು ಬಂದಂತೆ ಭಾಸವಾಗಿ ಕಣ್ಣೀರ ಹನಿ ಅವಳಿಗರಿವಿಲ್ಲದಂತೆ ಕೆಳಗಿಳಿಯುತ್ತಿತ್ತು.
     ನೀಲಕ್ಕ ಮತ್ತು ನಾರ್ಣಪ್ಪ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯವನೊಬ್ಬನೇ ಗಂಡು ಮಗು ಚಂದ್ರ.ಮನೆಯಲ್ಲಿ ತೀರ ಬಡತನವಿದ್ದರೂ ಹೊಟ್ಟೆಬಟ್ಟೆಗೇನೂ ಕಡಿಮೆ ಮಾಡಿರಲಿಲ್ಲ.ನಮ್ಮ ಮನೆಗೆ ಇವನೊಬ್ಬನೇ ವಂಶೋದ್ದಾರಕ ಎಂದು ಎಲ್ಲರಿಗಿಂತಲೂ ಹೆಚ್ಚು ಮುದ್ದಿನಿಂದಲೇ ಸಾಕಿದ್ದರು.ಪತಿ ನಾರ್ಣಪ್ಪ ಹೆಣ್ಣು ಮಕ್ಕಳಿಗೆಲ್ಲ ಮದುವೆ ಮಾಡಿ ತನ್ನ ಹೊರೆ ಇಳಿಸಿ ಇಹಲೋಕದ ಯಾತ್ರೆ ಮುಗಿಸಿದಾಗ ಚಂದ್ರ ಇನ್ನೂ ಸಣ್ಣವನು.ಇವನು ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಹಂಬಲ ನೀಲಕ್ಕನದಾಗಿದ್ದರೂ ಈ ಬಡತನದ ಮಧ್ಯೆ ಆಕೆ ಅಸಹಾಯಕಳಾಗಿದ್ದಳು.ಓದಿನಲ್ಲಿ ಮುಂದೆ ಇದ್ದ ಆತ ಶಾಲೆಗೆ ಅರ್ಧದಲ್ಲಿಯೇ ಪೂರ್ಣ ವಿರಾಮವಿಟ್ಟು, ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ಓಡಿ ಬಂದಿದ್ದು ಮುಂಬಯಿಗೆ..
    ಆರಂಭದ ದಿನಗಳಲ್ಲ್ಲಿ ಊರಿನ ಪರಿಚಯದವರ ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ,ಹೋಟೇಲ್ ಹುಡುಗರ ಬದುಕಿಗೆ ದಾರಿ ದೀಪವಾಗಿದ್ದ ಸಂಜೆ ಕಾಲೇಜಿಗೆ ಸೇರಿ, ಪದವಿ ಮುಗಿಸಿ ಅಲ್ಲಿಯೇ ದಿನಪತ್ರಿಕೆ ಕಚೇರಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಆತನ ಬದುಕಿನ ದಿಕ್ಕು ಬದಲಾಗಿತ್ತು.ಇತ್ತ ನೀಲಕ್ಕನಿಗೂ ವಯಸ್ಸಾಗತೊಡಗಿತ್ತು..ಆಕೆಗೂ ಇಲ್ಲಿ ಯಾರೂ ದಿಕ್ಕು ದೆಸೆಯಿರಲಿಲ್ಲ.ಸುಮಾರು ಆರೇಳು ವರ್ಷಗಳನ್ನು ಕಳೆದ ಚಂದ್ರ ಇದನ್ನೆಲ್ಲಾ ಯೋಚಿಸಿ, ಮನಸ್ಸು ಬದಲಾಯಿಸಿ ಊರ ಕಡೆ ಮುಖ ಮಾಡಿದ್ದ.ಊರಿಗೆ ಬಂದವನಿಗೆ ಕೆಲಸ ಸಿಗುವುದೇನೂ ಕಷ್ಟವಾಗಲಿಲ್ಲ.ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಸೇರಿಕೊಂಡ ಆತ ಅಲ್ಪ ಸಮಯದಲ್ಲಿಯೇ ಎಲ್ಲರಿಗೂ ಮೆಚ್ಚುಗೆಯಾಗಿ ಬಿಟ್ಟಿದ್ದನು.ತನ್ನ ವರದಿ ವಿಶ್ಲೇಷಣೆಗಳಿಂದ ಜನಪ್ರಿಯನಾಗಿ ಬಿಟ್ಟಿದ್ದನು.ಅನೇಕ ಜನರ ಘನಂದಾರಿ ಕೆಲಸಗಳ ಬಂಡವಾಳ ಬಯಲು ಮಾಡಿ ಸಮಾಜ ಸುಧಾರಣೆಯ ಪಣ ತೊಟ್ಟಿದ್ದನು.ಹೀಗಾಗಿ ಅವನ ಬರಹಗಳಿಗೆ ಅಭಿಮಾನಿಗಳು ಸಾಕಷ್ಟಿದ್ದರು.ಇವನ ಬರಹಗಳಿಗೆ ಧೈರ್ಯ ಹುಮ್ಮಸ್ಸು ತುಂಬುತ್ತ ಇದ್ದವರಲ್ಲಿ ಸೌಮ್ಯ ಕೂಡಾ ಒಬ್ಬಳು.ಈಕೆ ಬೇರಾರೂ ಅಲ್ಲ, ಶ್ಯಾಮರಾಯರ ಮುದ್ದಿನ ಮಗಳು.ಇನ್ನೂ ಪದವಿ ಓದುತ್ತಿದ್ದ ಆಕೆಗೆ ಇವನ ಬರಹ ಅಂಕಣಗಳೆಂದರೆ ಅಚ್ಚುಮೆಚ್ಚು.ಜೊತೆಗೆ ಅವನನ್ನೂ ಕೂಡಾ ಬಹಳವಾಗಿ ಮೆಚ್ಚಿಕೊಂಡಿದ್ದಳು, ಇಷ್ಟಪಟ್ಟಿದ್ದಳು.ಅವನಿಗೂ ಅವಳ ಒಂದೊಂದು ಅಭಿಮಾನದ ಮಾತು ಪ್ರೇರಣೆ ನೀಡುತ್ತಿತ್ತು.ಹೀಗೆ ಅವರ ಅಭಿಮಾನದ ಗೆಳೆತನ ಅನುರಾಗದವರೆಗೆ ಬಂದು ಮುಟ್ಟಲು ಹೆಚ್ಚು ಸಮಯ ಬೇಕಾಗಲಿಲ್ಲ.ಇದು ಇವರಿಬ್ಬರ ಹೊರತಾಗಿ ಮೂರನೆಯವರ ಕಣ್ಣಿಗೆ ಬಿದ್ದಿರಲಿಲ್ಲ.
    ಹೀಗಿರಬೇಕಾದರೆ ನೆರೆಯ ಕರಿಯಪ್ಪನ ನಡುವೆ ಹಾಗೂ ಶ್ಯಾಮರಾಯರ ನಡುವೆ ಜಾಗದ ತಕರಾರು ಎದ್ದಿತ್ತು.ರಾಯರ ತೋಟದ ಮನೆಯಿದ್ದ ಜಾಗದ ಸ್ವಲ್ಪ ಭಾಗ ತನ್ನದೆಂಬುದು ಅವನ ವಾದ ಆದರೆ ಆ ಜಾಗದ ಬಗ್ಗೆ. ಮಕ್ಕಳಿಲ್ಲದೆ ಹಿಂದುಮುಂದಿಲ್ಲದ ಅವನಿಗೆ ಅಷ್ಟೇನೂ ಒಲವಿರಲಿಲ್ಲ.ಆದರೂ ರಾಯರಿಗಾಗದ ಕೆಲವರು ಅವನ ಕಿವಿಯೂದಿ ಜಗಳಕ್ಕೆ ಕುಮ್ಮಕ್ಕು ನೀಡಿ ತಾವು ಖುಷಿ ಪಡುತ್ತಿದ್ದರು.ಅದೊಂದು ದಿನ ತಡರಾತ್ರಿ ಸೇರಿದ ರಾಯರಿಗಾಗದ ಕೆಲವರು ಈ ರೀತಿ ಕಾದಾಡುತ್ತಿದ್ದರೆ ಲಾಭವಿಲ್ಲ, ರಾಯರ ತೋಟದ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ದಂಧೆ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ.ಈ ವಿಷಯ ತಿಳಿದಿದ್ದವರು ಯಾರೂ ಪೋಲೀಸರಿಗೆ, ಅಧಿಕಾರಿಗಳಿಗೆ ತಿಳಿಸುವ ಧೈರ್ಯ ಮಾಡಿರಲಿಲ್ಲ.ಈ ಸಂಗತಿ ಒಮ್ಮೆ ಹೊರಕ್ಕೆ ಬಂದರೆ ರಾಯರ ಮಾನ ಹರಾಜಾಗುತ್ತದೆ, ರಾಯರು ಒಮ್ಮೆ ಕಂಬಿ ಎಣಿಸಿದರೆ ಮತ್ತೆ ನಮ್ಮ ತಂಟೆಗೆ ಬರುವುದಿಲ್ಲ,ಎಂದು ಲೆಕ್ಕಾಚಾರ ಹಾಕಿ ತಂತ್ರ ಹೂಡಿದರು.ಆದರೆ ಆ ಧೈರ್ಯ ಮಾತ್ರ ಅಲ್ಲಿ ಯಾರಿಗೂ ಇರಲಿಲ್ಲ.ಆಗ ಅವರ ಕಣ್ಣಿಗೆ ಬಿದ್ದವನೇ ಚಂದ್ರ.ಅವನೂ ಅಷ್ಟೇ ಹಿಂದು ಮುಂದು ಯೋಚಿಸದೆ ಮೊಂಡು ಧೈರ್ಯ ಮಾಡಿ ರಾಯರು ನಾಲ್ಕು ದಿನಗಳ ಮಟ್ಟಿಗೆ ಕಂಬಿ ಎಣಿಸುವಂತೆ ಮಾಡಿ ರಾಯರ ಸ್ವಾಭಿಮಾನಕ್ಕೆ ಕೆಸರೆರಚಿದ್ದ.ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ರಾಯರು ಮನಸ್ಸಿನಲ್ಲಿಯೇ ಕುದಿಯ ತೊಡಗಿದರು.ಕರಿಯಪ್ಪನೇ ಯಾರದೋ ಒತ್ತಡಕ್ಕೆ ಬಿದ್ದು ಈ ಕೆಲಸ ಮಾಡಿರಬಹುದು ಎಂಬ ಸಂಶಯದ ಸುಳಿಯೊಂದು ಅವರ ಸುತ್ತ ಸುತ್ತುತ್ತಿತ್ತು.ನನ್ನ ಈ ಸ್ಥಿತಿಗೆ ಕಾರಣನಾದವನ ಗತಿ ಕಾಣಿಸದೆ ಬಿಡಲಾರೆ ಎಂದು ಪಣತೊಟ್ಟ ಅರು ಎಂದಿನಂತೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆಯಿಟ್ಟರು.ಈಗ ಅವರ ಮನಸ್ಸು ನಿರಾಳವಾಗಿತ್ತು.
     ಹೀಗೆ ಒಂದೆರಡು ದಿನ ಕಳೆದಿರಬೇಕು, ಮನೆಗೆಲಸದ ಮಂಜು ಹೇಳಿದ ಮಾತು ಕೇಳಿ ಅವರಿಗೆ ನಂಬಲಾಗಲಿಲ್ಲ."ಹೌದು ಧಣೀ ನಿನ್ನೆ ವಸಂತನ ಗೂಡಂಗಡಿಯ ಹತ್ರ ಇದೇ ಸುದ್ದಿ ಮಾತಾಡುತ್ತಿದ್ದರು.ನನಗೂ ನಂಬಿಕೆ ಬರಲಿಲ್ಲ ಆದರೆ ವಿಷಯ ಎಲ್ಲಾ ತಿಳಿದಾಗ ನನಗೂ ಇದು ನಿಜ ಇರಬೇಕೆಂದು ನಂಬಿಕೆ ಬಂತು"ಎಂದಾಗ ರಾಯರಿಗೆ ಅಷ್ಟೇ ಸಾಕಿತ್ತು.ನನ್ನ ಕಣ್ಣ ಮುಂದೆಯೇ ಬೆಳೆದು ಈಗ ನನ್ನ ನಾಶಕ್ಕೆ ಪಣ ತೊಟ್ಟವನ ಸರ್ವನಾಶ ಮಾಡದೆ ಇರಲಾರೆ ಎಂದು ಹಲ್ಲು ಮಸೆಯತೊಡಗಿದರು.
    ಆ ದಿನ ಸಂಜೆ ಚಂದ್ರ ಎಂದಿನಂತೆ ತನ್ನ ಬೈಕನ್ನು ಎಂಭತ್ತರ ವೇಗದಲ್ಲಿ ಹಾರಿಸಿಕೊಂಡು ಬರುತ್ತಿದ್ದಾಗ ಅಡ್ಡವಾಗಿ ಬಂದ ಲಾರಿಯೊಂದು ಢಿಕ್ಕಿ ಹೊಡೆದು ಹೋದ ರಭಸಕ್ಕೆ ಅವನ ಪ್ರಾಣ ಪಕ್ಷಿ ಅಲ್ಲೇ ಹಾರಿ ಹೋಗಿತ್ತು.ಆ ಜನ ವಸತಿ ರಹಿತ ಪ್ರದೇಶದಲ್ಲಿ ಢಿಕ್ಕಿ ಹೊಡೆದ ಲಾರಿ ರಾಯರದ್ದೇ ಎಂದು ಕೊನೆಗೂ ಯಾರಿಗೂ ತಿಳಿಯಲೇ ಇಲ್ಲ.
    ಮರುದಿನ ಎಲ್ಲೆಡೆ ಸುದ್ದಿಯಾಗಿತ್ತು.ನೀಲಕ್ಕನ ಮಗ ನಿನ್ನೆ ಬೈಕ್ ಆಕ್ಸಿಡೆಂಟ್ ನಲ್ಲಿ ತೀರಿ ಹೋದನಂತೆ,ರಾಯರ ಬಗ್ಗೆ ಪೋಲೀಸ್ ಕೇಸು ಕೊಟ್ಟಿದ್ದು ಅವನೇ ಅಂತೆ.ಅವನು ರಾಯರ ಭೂತದ ಉಪದ್ರವದಿಂದಲೇ ಸತ್ತಿದ್ದು ಅಂತ ಕಾಣುತ್ತೆ.ಅವರನ್ನು ಎದುರು ಹಾಕಿಕೊಂಡ್ರೆ ಬರ್ಕತ್ತಾಗಲಿಕ್ಕುಂಟಾ?....ಎಂದು ಊರಿಡೀ ಸುದ್ದಿಯಾಯಿತು.ಆದರೆ ನೀಲಕ್ಕನಿಗೆ ಎಲ್ಲ ಅರ್ಥವಾಗತೊಡಗಿತ್ತು.ಯಾರದೋ ಒತ್ತಡಕ್ಕೆ ಬಲಿಯಾಗಿ ತನ್ನ ಮಗ ತಂದುಕೊಂಡ ದುರಂತದ ಸಾವೆಂದು ಅವಳ ಮನಸ್ಸು ಹೇಳುತ್ತಿತ್ತು.
    ಈ ದುರಂತ ನಡೆದ ನಂತರ ಸೌಮ್ಯಳ ಮನಸ್ಸು ಕೂಡಾ ಅಲ್ಲೋಲಕಲ್ಲೋಲವಾಗಿತ್ತು.ಚಂದ್ರನನ್ನು ಕಳೆದುಕೊಂಡ ಆಕೆಯ ಹೃದಯ ಕತ್ತಲಾಗಿತ್ತು.ಮನಸಾರೆ ಪ್ರೀತಿಸುತ್ತಿದ್ದ ಆಕೆಗೆ ಅವನಿಲ್ಲದೆ ಹೃದಯ ನೋವಿನ ಕಡಲಾಗಿತ್ತು.ತನ್ನ ತಂದೆಯವರೇ ಈ ಘಟನೆಗೆ ಕಾರಣವೆಂದು ತಿಳಿದಾಗ "ನಾನು ಯಾಕಾದರೂ ಈ ಮನೆಯಲ್ಲಿ ಹುಟ್ಟಿದೆ?ನನ್ನ ಯಾವ ತಪ್ಪಿಗೆ ಈ ಶಿಕ್ಷೆ" ಎಂದು ಮನಸ್ಸು ರೋದಿಸುತ್ತಿತ್ತು.ಅವಳ ಬದುಕು ಕಳೆಗುಂದಿತ್ತು.ಆದರೆ ಇದು ಯಾವುದೂ ರಾಯರ ಗಮನಕ್ಕೇ ಬಂದಿರಲಿಲ್ಲ.ತನ್ನ ಶತ್ರುವೊಬ್ಬನನ್ನು ಮುಗಿಸಿದ ಸಂತೋಷದಲ್ಲಿ ಅವರು ತೇಲಾಡುತ್ತಿದ್ದರು.
     ಈ ನಿಮಿತ್ತ ರಾಯರ ಮನೆಯಲ್ಲಿ ದೈವದ ನೇಮಕ್ಕೆ ತಯಾರಿ ನಡೆಯುತ್ತಿತ್ತು.ಗಗ್ಗರದ ದನಿ ಕೇಳುತ್ತಿದ್ದಂತೆ ಮುಖದಲ್ಲಿ ಮಂದಹಾಸವೊಂದು ಮಿಂಚಿ ಮಾಯವಾಗುತ್ತಿತ್ತು.ತನ್ನ ಗುರಿ ಸಾಧಿಸಿದ ಸಂತೃಪ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.ಇಷ್ಟೆಲ್ಲಾ ಸಂಭ್ರಮಗಳ ನಡುವೆ ತಮ್ಮ ಮುದ್ದಿನ ಮಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಮಗಳು ಎಲ್ಲೂ ಕಾಣದಿದ್ದುದನ್ನು ಕಂಡು ಮನಸ್ಸು ಕಳವಳಗೊಂಡು ಹುಡುಕುತ್ತಿದ್ದಾಗ ಮನೆಯ ಕೊಟ್ಟಿಗೆಯ ಪಕ್ಕಾಸಿನಲ್ಲಿ ಸೌಮ್ಯಳ ಶವ ನೇತಾಡುತಿತ್ತು.ಅದರ ಕಾರಣ ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು.
                 *********************

ಗುರುವಾರ, ನವೆಂಬರ್ 1, 2012

                                               ನಿರೀಕ್ಷೆ.......


                                       ಸಂಜೆಬಣ್ಣ ಕಳೆದು ಕತ್ತಲೆಡೆಗೆ ಸರಿವ
                                       ಮಾಗಿಹೋದ ಕರಗುತಿರುವ ಬಾನು
                                       ನಿನ್ನ ಪ್ರೀತಿಗಾಗಿ ಹೀಗೆ ಶಬರಿಯಂತೆ
                                       ದಿನವೂ ನೆನೆದು ಕಾದಿರುವೆ ನಾನು..!

                                       
                                       ಬದುಕಿಸುತ್ತಿದೆ ಇನ್ನೂ ನನ್ನ 
                                       ಇಂದಲ್ಲ ನಾಳೆ ಬರುವೆಯೆಂಬ 
                                       ಒಂದೇ ಒಂದು ನಿರೀಕ್ಷೆ....
                                       ನಿನ್ನೊಡನಾಟದ ನೆನಪುಗಳೇ
                                       ಈ ಬದುಕಿನ ಸತ್ವಪರೀಕ್ಷೆ....

                                       
                                       ನೋಡಿದ್ದು., ಕೂಡಿದ್ದು.., ಕಳೆದಿದ್ದು...
                                       ಹೀಗೆ ಲೆಕ್ಕವಿರದ ದಿನಗಳೆಷ್ಟೋ..
                                       ನನ್ನ ಖಾಲಿ ಬದುಕ ಪುಸ್ತಕದಲಿ
                                       ನೀ ಗೀಚಿ ಹೋದ ಪುಟಗಳೆಷ್ಟೋ..!

                                      
                                       ಮರೆತು ಬಿಡಲಿ ಹೇಗೆ? ಗೆಳೆಯ
                                       ನಿನ್ನ ಆ ಕಣ್ಣ ಸೆಳೆವ ರೂಪ..
                                       ಎಲ್ಲೇ ಇರಲಿ..ಹೇಗೇ ಇರಲಿ
                                       ನಿನ್ನ ನೆನಪೇ ಬಾಳ ದಾರಿದೀಪ...
                                       

ಶನಿವಾರ, ಅಕ್ಟೋಬರ್ 27, 2012

ಹೀಗೆ ಇನ್ನೊಂದಿಷ್ಟು ಸಾಲುಗಳು......

ಕತ್ತಲಾದ
ಬದುಕ ದಾರಿಯಲ್ಲಿ
ಸಿಗದ ಪ್ರೀತಿಗೆ
ತಡಕಾಡಿ ಸೋತು
ಕೈ ಹೊತ್ತು ಕೂತಾಗ
ಬೆಳಕಾಗಿ ಬಂದಳು..
ಈಗ
ಹುಣ್ಣಿಮೆಯಿರಲಿ
ಅಮಾವಾಸ್ಯೆಯಿರಲಿ
ಬದುಕಲ್ಲಿ ಪೂರ್ತಿ
ಬೆಳದಿಂಗಳು..!
**********
ಗೆಳತಿ;
ಬದುಕಲಿ ಪ್ರೀತಿಯೆಂದರೆ
ಮುತ್ತು ಪೊಣಿಸಿದ ಹಾರ
ನೀ ಮುತ್ತಾದರೆ
ನಾ ದಾರ..
ಒಬ್ಬರಿಗೊಬ್ಬರು ಆಧಾರ
ಒಂದಕ್ಕೊಂದರ
ಬೆಸುಗೆ ಇಲ್ಲಿ...
ತಪ್ಪಿ ಹೋದರೆ
ಬದುಕು ಚೆಲ್ಲಾಪಿಲ್ಲಿ..!
**********

ಕತ್ತಲಾವರಿಸಿದ ದಾರಿಯಲ್ಲಿ
ಧುತ್ತನೆದುರಾದ ಪ್ರಶ್ನೆಗಳಿಗೆ
ಉತ್ತರ ಹುಡುಕುತ್ತಾ ಹೊರಟಾಗ
ಹೊತ್ತು ಮುಗಿದಿತ್ತು..
ಸತ್ತ ಕನಸುಗಳ
ಹೊತ್ತು ಮಲಗಿದ ನನ್ನ
ಅದು ಯಾರೋ ಹೊತ್ತಾಗಿತ್ತು.!!
**********

ನಿನ್ನ ಕಂಗಳಲ್ಲಿನ
ಬಿಟ್ಟಿರಲಾಗದ ಆಕರ್ಷಣೆ
ಸೂಜಿಗಲ್ಲಿನಂತೆ
ಸೆಳೆಯುತ್ತಿದೆ ಕಣೇ...
ನೀನೆಷ್ಟೇ ಹೋದರೂ ದೂರ
ಮತ್ತೆ ಮತ್ತೆ ನೆನಪಾಗಲು
ಕಾರಣವೂ ಇದೇ ತಾನೇ...?!
**********



ಶುಕ್ರವಾರ, ಅಕ್ಟೋಬರ್ 26, 2012

ಹೀಗೇ ಕೆಲವು ಸಾಲುಗಳು.......

ನಿನ್ನ ಬರುವಿಕೆಗಾಗಿ ಕಾದು
ಅರ್ಧ ಬದುಕು ಕಳೆದಿದ್ದೆ
ನೀ ಸಿಕ್ಕ ಮೇಲೆ
ನಿನ್ನಲ್ಲಿ ನಾ ಪೂರ್ತಿ
ಕಳೆದು ಹೋಗಿದ್ದೆ
*********

ಮನದೊಳಗೆ
ಅವಿತು ಕುಳಿತಿತ್ತು
ಹೇಳಲು ಉಳಿದ ಮಾತು
ಸ್ವಲ್ಪ ಜಗಳ, ಸ್ವಲ್ಪ ಹರಟೆ
ಶುರುವಾಗುವ ಮೊದಲೇ
ನೀ ಅರ್ಧದಲ್ಲೇಕೆ ಎದ್ದು ಹೊರಟೆ??
*********

ನಾ ತಿಳಿದಿದ್ದೆ ಗೆಳತಿ
ಉಸಿರಿಗೆ
ಗಾಳಿಯಿದ್ದರಷ್ಟೇ ಸಾಕು
ನೀ ಬಿಟ್ಟು ಹೋದ ಮೇಲೆ
ತಿಳಿಯಿತು ಅದಕ್ಕೆ
ಜೀವ ತುಂಬುವವರು ಬೇಕು..!
*********

ನಿನ್ನ ನಗುವಿಗೂ
ಇಷ್ಟೊಂದು ಶಕ್ತಿಯಿದೆ
ಕಣ್ಣೋಟ
ಇಷ್ಟೊಂದು ಹರಿತವಿದೆ
ಎಂದು ಅರಿವಾದದ್ದು
ಅದಕ್ಕೆ ನಾ ಗುರಿಯಾದ ಮೇಲೆ !!
**********

ಗುರುವಾರ, ಜನವರಿ 26, 2012

ಮುಂದುವರಿದವರು......

ಸತ್ಯ ಸಹನೆ ಶಾಂತಿ ಮಂತ್ರಗಳೇ  ನಮ್ಮ ಅಸ್ತ್ರ ಎನ್ನುತ್ತೇವೆ
ಕೆಟ್ಟ ಹಸಿವೆಗೆ,ನಮ್ಮ ಸ್ವಾರ್ಥಕೆ ನಮ್ಮವರನ್ನೇ ಕಿತ್ತು ತಿನ್ನುತ್ತೇವೆ

ದೇಶ ಪ್ರೇಮ,ಭಾಷಾಭಿಮಾನ,ಜಾತ್ಯಾತೀತತೆಯ ನುಡಿಯುತ್ತೇವೆ
ಕೊನೆಯಿರದ ದಾಹಕ್ಕೆ ಕೊನೆಗೆ ಹಸಿರಕ್ತವನ್ನಾದರೂ ಕುಡಿಯುತ್ತೇವೆ

ಅಸಾಧ್ಯ,ಅಗೋಚರ ಭವಿಷ್ಯಗಳ'ದಿವ್ಯ'ದೃಷ್ಟಿಯಲ್ಲಿ ಕಾಣುತ್ತೇವೆ
ಕಣ್ಣೆದುರಿನ ಕೊಲೆ,ಅತ್ಯಾಚಾರ ಹಿಂಸೆಗಳಿಗೆ ಕುರುಡರಾಗುತ್ತೇವೆ

ನೆಟ್,ಮೊಬೈಲ್,ಚಾಟ್ ನಲ್ಲಿ ಅಪರಿಚಿತರಲ್ಲೂ ಮಾತನಾಡುತ್ತೇವೆ
ಮನೆಯ ಮೂಲೆಯಲ್ಲಿನ ಹಿರಿಯರೆಂದರೆ ಮೂಕರಾಗುತ್ತೇವೆ

ಊರಿನ ಆಗುಹೋಗು,ಕ್ರಿಕೆಟ್ ಸ್ಕೋರ್ ತಡವಿಲ್ಲದೆ ಕೇಳುತ್ತೇವೆ
ದೀನರ ಅಳಲು,ಆಕ್ರಂದನ ನೋವುಗಳಿಗೆ ಕಿವುಡರಾಗುತ್ತೇವೆ

ಮುಗಿಲೆತ್ತರಕೆ ಹಾರುತ್ತೇವೆ,ಚಂದ್ರಮಂಗಳಗಳ ಮುಟ್ಟುತ್ತೇವೆ
ಜಾತಿ ಧರ್ಮ,ಮಠಮಂದಿರಗಳ ಹೆಸರಿನಲ್ಲಿಗೋರಿ ಕಟ್ಟುತ್ತೇವೆ

ಬಡವರ ಅನಾಥರ ಬೆವರಿನಲ್ಲಿ ಸೌಧ ಬಂಗಲೆಗಳ ಕಟ್ಟುತ್ತೇವೆ
ನೆಮ್ಮದಿ ಸುಖ ಸಂತೋಷ ಸಂಬಂಧಗಳ ದೂರ ಅಟ್ಟುತ್ತೇವೆ

ಸ್ವರ್ಗವೆಂಬುದ ಇಲ್ಲಿಯೇ ಬಿಟ್ಟು ನರಕದ ಬಾಗಿಲು ತಟ್ಟುತ್ತೇವೆ
ಎಷ್ಟೊಂದು ಮುಂದುವರಿದಿದ್ದೇವೆ ನಾವು..?!

ಮಂಗಳವಾರ, ಜನವರಿ 3, 2012

'ನಿನ್ನ' ಬಗ್ಗೆ ಅನಿಸಿದ್ದು.....

ನೀ ನನ್ನ ಬದುಕಿನಲ್ಲಿ
ಕಳೆದು ಹೋದಾಗಿನಿಂದ
ಅಲ್ಲಿ ಬರಿಯ ಏಕಾಂತ
ನಿಶ್ಯಬ್ಧ.... ನೀರವ...
ಗೆಳತೀ ನೀನೆಂದಿಗೂ
ನನ್ನವಳೆಂದೂ ಗೊತ್ತಿದ್ದು
ನೀ ಬಯಸಿರುವ
ಕನಸಿನ ಹುಡುಗ ಯಾರವ?!

**********

ನೀ ನಿನ್ನೊಳಗೆ ಮುಚ್ಚಿಟ್ಟ
ಬಿಚ್ಚಿಡಲಾಗದೆ ಎದೆಯೊಳಗೆ
ಬಚ್ಚಿಟ್ಟ
ಬೆಚ್ಚಗಿನ ಹೊಚ್ಚ ಹೊಸ ಭಾವಗಳು
ಆ ಕಣ್ಣಂಚಲ್ಲಿ ಕಿಚ್ಚು ಹಚ್ಚಿ
ಹುಚ್ಚೆಬ್ಬಿಸಿ
ನನ್ನೆದೆಯಲ್ಲಿ ಹಚ್ಚ ಹಸುರಾಗಿ
ಅಚ್ಚೊತ್ತಿದ ಮೇಲೆ 
ನಾ ನಿನ್ನ ಮೆಚ್ಚಿದ್ದು ಹೆಚ್ಚೇ..??

***********

ಸುಟ್ಟು ಹೋದ ಹೃದಯದಲ್ಲಿ
ಈಗ ಬೆಳಕೆಲ್ಲಿ?
ನೀ ನಿಟ್ಟು ಹೋದ ಮೇಲೆ
ಕೊಳ್ಳಿ..!
ಬರಡು ಭೂಮಿಯಲ್ಲಿ
ಹೇಗೆ ಹೂ ಬಿಟ್ಟೀತು ಗೆಳತಿ
ನೀ ನೆಟ್ಟ ಬಳ್ಳಿ ?

************

ಜೀವನವೆಂದರೆ
ನೆನಪುಗಳ ಜೊತೆಗೆ
ಕನಸುಗಳು ಬೇಕಂತೆ
ಗೆಳತೀ..ನೀ
ನನ್ನವಳಾಗದಿದ್ದರೇನಂತೆ?
ಜೊತೆಯಿರಲು ಸದಾ
ಕಾಡುವ ನೆನಪುಗಳ ಕಂತೆ
ನಿನ್ನ ಮರೆಯಲಾಗದ
ಬದುಕೀಗ ನಿತ್ಯ
ಕನಸುಗಳ ಸಂತೆ..

***********

ನನ್ನೆದೆಯಂಗಳದಲ್ಲಿ ನೀ
ಹಕ್ಕಿಯಂತೆ ನಲಿದಾಡುತ್ತಿದ್ದು
ಹಾರಿ ಹೋದ ಮೇಲೆ ದೂರ
ಅಲ್ಲಿ ಉಳಿದದ್ದು
ನೀನಿಟ್ಟ ಹೆಜ್ಜೆಗಳು ಮೂಡಿಸಿದ
ಆ ಗೆಜ್ಜೆ ಸದ್ದು

************

ಮೊದಲ ಮಳೆ ಹನಿಗೆ
ಕಾದ ಭುವಿಯಂತೆ
ಈ ಪ್ರೀತಿ ಎಂಬುದನ್ನು
ಗೆಳತಿ ನೀನ್ಯಾಕೆ ಅರಿಯೆ?
ಹೃದಯದಲ್ಲಿ ನೂರಾಸೆ ಕನಸುಗಳ
ಕಿಡಿ ಹೊತ್ತಿಸಿದ ನೀನು
ಬೆಳಕಾಗುವ ಮೊದಲೇ
ನೀರೆರಚಿದ್ದು ಸರಿಯೇ..?!

************

ಮಂಗಳವಾರ, ಸೆಪ್ಟೆಂಬರ್ 13, 2011

ಮೂರು ಹನಿಗಳು......

ವೇದ ಸುಳ್ಳಾದರೂ
ಗಾದೆ ಸುಳ್ಳಾಗದು
ಹೇಗೆ ಅಂದಿರಾ.?!
ಉದಾಹರಣೆಗೆ,
ಅತ್ತೆಗೊಂದು ಕಾಲ
ಸೊಸೆಗೊಂದು ಕಾಲ
ಇಂದು ಸೋನಿಯಾ
ಅಂದು ಇಂದಿರಾ..!

.........

ರಾಜಕಾರಣಿಗಳಿಗೆ ಅಭ್ಯಾಸ
ಕೇಳಿದ್ದು ಸಿಗದಿದ್ದರೆ ಪಕ್ಷಾಂತರ
ಜೊತೆಗೆ ರಾಜಿನಾಮೆ ಸ್ಥಾನಕ್ಕೆ
ಈಗ ಸ್ವಲ್ಪ ವ್ಯತ್ಯಾಸ..
ಅಲ್ಲಿಂದಿಲ್ಲಿ ಸ್ಥಳಾಂತರ
ದಿಲ್ಲಿಯಿಂದ ಕೃಷ್ಣ ಜನ್ಮಸ್ಥಾನಕ್ಕೆ !

.........

ಪೇಪರಿನಲ್ಲಿ ಸುದ್ದಿ..
ಟೂತ್ ಪೇಸ್ಟಿನಲ್ಲಿ ಕೂಡಾ ನಿಕೋಟಿನ್ನು
ಹಾಗಾಗಿ..,
ಧೂಮಪಾನ ಮಾಡಬೇಕಿಲ್ಲ ಇನ್ನು!
ಬಿಟ್ಟುಬಿಡಿ ಹಾಳು ಸಿಗರೇಟ್
ನಿತ್ಯ ಉಪಯೋಗಿಸಿ ಕೋಲ್ಗೇಟ್

........

ಗುರುವಾರ, ಏಪ್ರಿಲ್ 7, 2011

ಅ(ವ್ಯ)ವಸ್ಥೆಯ ಸುತ್ತ.....

ಕೊಟ್ಟಿದ್ದೇವೆ ನಾವು
ಕಳ್ಳರಿಗೆ
ನಮ್ಮ ಮನೆಯ ಕೀ ಯ
ಅದಕೇ ಎಲ್ಲೂ ನೋಡಿ
ದೋಚುವವರೇ ಈಗ
ಸ್ವಲ್ಪ ಇರಲಿ ಎಚ್ಚರ..
ಇದು ಸದ್ಯದ ರಾಜಕೀಯ !

..............

ಕಂಡ ಕಂಡಲ್ಲೆಲ್ಲಾ ಹೇಳುವರು
ನಮ್ಮ ಯಡ್ಯೂರಪ್ಪ
ಕೋಟಿ ಕೋಟಿ ನುಂಗಿ
ನೀರು ಕುಡಿದರು ಗೌಡರು
ಸೇರಿ ಮಗ ಮತ್ತು ಅಪ್ಪ
ಉಳಿದುದನ್ನು ನಾವೂ ಈಗ
ಸ್ವಲ್ಪತಿಂದರೇನು ತಪ್ಪಾ..?!

..............

ಸಿಕ್ಕ ಅಲ್ಪ ಕಾಲದಲ್ಲೇ ಎಲ್ಲಾ
ಸೇರಿ ಹಂಚಿಕೊಂಡು
ತೇಗುವಷ್ಟು ಉಂಡರು
ಇನ್ನೂ ಹೊಟ್ಟೆ ತುಂಬದವರ
ಸಿಟ್ಟು ಕಂಡು ಕೊನೆಗೆ
ಸಿ ಎಂ ಅಂದರು..
ಪಕ್ಷದಲ್ಲಿರುವವರೆಲ್ಲಾ ಪುಂಡರು !

.............

ಸದನದಲ್ಲಿ ನಡೆಯುವುದು
ತಮ್ಮೊಳಗೇ ನಿಂದನೆ
ಪರಸ್ಪರ ಜಗಳ ಗಲಾಟೆ
ಬೈಗುಳಗಳ ಭರಾಟೆ
ಆದರೆ...
ಮರುದಿನದ
ಪೇಪರಿನಲ್ಲಿ ಸುದ್ದಿ
ಸರ್ಕಾರದ ವಿರುದ್ಧ
ಪ್ರತಿಪಕ್ಷಗಳ ತರಾಟೆ

ಗುರುವಾರ, ಜನವರಿ 13, 2011

ಅದೃಷ್ಟದ ಹುಡುಗ

(ಸುದ್ದಿಬಿಡುಗಡೆ ವಾರಪತ್ರಿಕೆ ದೀಪಾವಳಿ ವಿಶೇಷಾಂಕ 2008ರ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ ಕಥೆ)

ಅದು ಉದ್ದನೆಯ ಬೈತಲೆಯಂತೆ ಚಾಚಿದ ದಾರಿ.ಇಕ್ಕೆಲಗಳಲ್ಲಿ ಒಂದಷ್ಟು ಮನೆಗಳು.ಸುಮಾರು ಇನ್ನೂರೈವತ್ತು ಮನೆಗಳಿರುವ ಪುಟ್ಟ ಹಳ್ಳಿಯದು.ಆ ದಾರಿಯ ಕೊನೆಗೆ ಒಳಗೆ ಹಾದು ಹೋದರೆ ಸಿಗುವುದು ನೀಲಕ್ಕನ ಮನೆ, ಊರ ಹೊರಗೆ ಕತ್ತಲಾಯಿತೆಂದರೆ ಸಾಕು ನೀಲಕ್ಕನ ಮನೆಯೊಳಗೆ ಚಿಮಿಣಿ ದೀಪದ ಬೆಳಕು ಕಾಣುತ್ತಿತ್ತು.ಆ ಊರಿಗೆ ಇನ್ನೂ ವಿದ್ಯುತ್ತಿನ ಸ್ಪರ್ಶವಾಗಿಲ್ಲವೆಂದಲ್ಲ.ಅದು ಇದ್ದರೂ ಮುಖ್ಯ ರಸ್ತೆಯವರೆಗೆ ಮಾತ್ರ.ಇವಳ ಮನೆಯೋ ಊರಿನಿಂದ ದೂರ,ಗದ್ದೆ ತೋಟ ಗುಡ್ಡ ತೋಡು ಇಳಿದು ಹೊಗುವುದೆಂದರೇನೇ ಪ್ರಯಾಸದ ಸಂಗತಿ.ಪತಿ ನಾರ್ಣಪ್ಪ ಸಾಯುವ ಮೊದಲು ಮಾಡಿಟ್ಟಿದ್ದು ಅದೊಂದೇ ಈ ಮುರುಕು ಮನೆ!ತನ್ನ ಪಾಲಿನ ಇಬ್ಬರು ಮಕ್ಕಳನ್ನು ನೀಲಕ್ಕ ತನ್ನೆರಡು ಕಣ್ಣುಗಳೆಂಬಂತೆ ಮುದ್ದಿನಿಂದ ಸಾಕಿದ್ದಳು.ಹುಟ್ಟಿನೊಂದಿಗೆ ಬಡತನ ಅಂಟಿಸಿಕೊಂಡು ಬಂದಿದ್ದರೂ ನೀಲಕ್ಕ ಮಕ್ಕಳ ಪ್ರೀತಿಗೇನೂ ಕಡಿಮೆ ಮಾಡಿರಲಿಲ್ಲ.ಮಗ ಮನುವನ್ನಾದರೂ ಚೆನ್ನಾಗಿ ಓದಿಸಿ ಒಂದು ದಾರಿಗೆ ತರಬೇಕೆಂದುಕೊಂಡರೂ ಈ ಬಡತನದೊಂದಿಗಿನ ಹೋರಾಟದಲ್ಲಿ ಅವಳು ಸೋತು ಹೋಗಿದ್ದಳು.ಆದರೂ ಮಗನ ಮೇಲೆ ತುಂಬು ಭರವಸೆಯಿಟ್ಟಿದ್ದಳು,ತನ್ನ ಬಾಳಿಗೆ ಒಂದಲ್ಲ ಒಂದು ದಿನ ಬೆಳಕಾಗುತ್ತಾನೆ ಎಂಬ ಆಶಾಭಾವ ಹೊತ್ತು ಕುಳಿತಿದ್ದಳು.ಅರ್ಧದಲ್ಲಿ ಶಾಲೆಗೆ ಪೂರ್ಣವಿರಾಮವಿಟ್ಟು ಕೈಚೆಲ್ಲಿ ಕುಳಿತದ್ದ ಮನು. ಮನೆಯಲ್ಲಿನ ಕಿತ್ತು ತಿನ್ನುವ ಬಡತನದಿಂದ ಬೇಸತ್ತು,ಅಮ್ಮನ ತೊಳಲಾಟ,ತಂಗಿಯ ಭವಿಷ್ಯ ಕಣ್ಣೆದುರು ಬಂದಂತಾಗಿ ಪರಿಚಯದ ವಾಸುದೇವರವರಲ್ಲಿ ಒಂದು ದಿನ "ಎಲ್ಲಾದ್ರೂ ಕೆಲ್ಸ ಇದ್ರೆ ಹೇಳಿ ಸಾರ್,ಹೋಟೆಲಾದ್ರೂ ಪರ್ವಾಗಿಲ್ಲ,ಮನೆಗೆಲಸವಾದ್ರೂ ಆಗ್ಬಹುದು"ಎಂದಾಗ ಅವರು"ಮೊನ್ನೆ ಗೆಳೆಯ ಅನಂತಯ್ಯನನವರು ತಮ್ಮ ಮನೆಯಲ್ಲಿ ಕೆಲಸಕ್ಕೆ ಹುಡುಗರು ಇದ್ರೆ ಹೇಳಿ,ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂದಿದ್ರು.ಒಳ್ಳೆಯದಾಯಿತು ನೋಡು ನಾನು ಅವರಿಗೆ ಫೋನ್ ಮಾಡಿ ಕೇಳುತ್ತೇನೆ.ನಿನ್ನ ಸಮಸ್ಯೆಯೂ ಪರಿಹಾರವಾಗಬಹುದು" ಎಂದಾಗ ಮನುವಿನಲ್ಲಿ ಸಮಾಧಾನದ ನಿಟ್ಟುಸಿರಿತ್ತು.
ಅಂದು ಇನ್ನೂ ಬೆಳಗಿನ ಜಾವ ಬಾಗಿಲು ಟಕ್ ಟಕ್ ಎಂದು ಬಡಿವ ಸದ್ದಾಗಿ ವಯಸ್ಸಾದ ಹಿರಿಯರೊಬ್ಬರು ಮನೆಯಿಂದ ಹೊರಬಂದು,ಹೊರಗಡೆ ದೊಡ್ಡದೊಂದು ಬ್ಯಾಗು ಹಿಡಿದು ನಿಂತಿದ್ದ ಮನುವನ್ನು ಕಂಡು ಪ್ರಶ್ನಾರ್ಥಕವಾಗಿ ದಿಟ್ಟಿಸತೊಡಗಿದಾಗ ಮನು ನಮ್ರವಾಗಿ"ಸಾರ್ ಅನಂತಯ್ಯನವರ ಮನೆ ಇದೇ ಅಲ್ವಾ? ವಾಸುದೇವರವರು ಕಳುಹಿಸಿದ್ದು.ಕೆಲಸಕ್ಕೆಂದು ಬಂದಿದ್ದೀನಿ."ಅಂದಾಗ ಅನಂತಯ್ಯನವರು"ಹಾಂ ನೀನಾ!?ನಾನು ಅವನ ಹತ್ತಿರ ಕೆಲಸಕ್ಕೆ ಯಾರಾದ್ರೂ ಇದ್ರೆ ಹೇಳು ಅಂದಿದ್ದೆ.ಅವನು ಕಳುಹಿಸಿದ್ನಾ?ಬಾಪ್ಪಾ ಒಳಗೆ ಬಾ.."ಎಂದು ದೊಡ್ಡದಾಗೇ ಬಾಗಿಲು ತೆರೆದರು.
ಆ ಮನೆ ಕಂಡೇ ಮನುವಿಗೆ ಆಶ್ಚರ್ಯವಾಗಿತ್ತು.ದೊಡ್ಡದಾದ ಬಂಗಲೆಯಂತಹ ಮನೆ, ಪುಟ್ಟ ಗುಡಿಸಲಿನಲ್ಲಿ ಇಷ್ಟು ವರ್ಷ ಕಳೆದ ಅವನಿಗೆ ಅರಮನೆ ಹೊಕ್ಕಂತಾಗಿತ್ತು.ಅಷ್ಟರಲ್ಲಿ ಅನಂತಯ್ಯನವರು ಕೆಲಸದವನೊಬ್ಬನನ್ನು ಕರೆದು"ಈ ಹುಡುಗನಿಗೆ ಆ ಹಿಂದುಗಡೆಯ ರೂಮು ತೋರಿಸು,ಕೈ ಕಾಲು ಮುಖ ತೊಳೆದುಕೊಂಡು ಬರಲಿ"ಎಂದು ಅವನ ಹಿಂದೆಯೇ ಕಳುಹಿಸಿದರು. ಅಂದಿನಿಂದ ಆ ಮನೆ ಅವನದಾಯಿತು.ತನ್ನ ಮನೆಯಲ್ಲಿ ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದ ಮನುವಿಗೆ ಈಗ ಹೊಟ್ಟೆ ತುಂಬಾ ಊಟ, ಕಣ್ತುಂಬಾ ನಿದ್ದೆ,ಜೊತೆಗೊಂದಿಷ್ಟು ಸಂಬಳ ಸಿಗುತ್ತಿತ್ತು.ಮನುವಿಗೆ ಇದನ್ನೆಲ್ಲಾ ಕಂಡು"ನೀನು ತುಂಬಾ ಅದೃಷ್ಟದ ಹುಡುಗನಂತೆ,ಈತನಿಂದಲೇ ನಿಮಗೆ ಒಳ್ಳೆಯದಾಗುತ್ತದೆ ಎಂದು ನಿನ್ನ ಜಾತಕ ನೋಡಿದ ಮಕ್ಕಿತ್ತಾಯರು ಹೇಳಿದ್ರು"ಎಂದು ಚಿಕ್ಕಂದಿನಿಂದಲೇ ಅವನ ಅಮ್ಮ ಹೇಳುತ್ತಿದ್ದ ಮಾತುಗಳು ಈಗ ನೆನಪಿಗೆ ಬಂದು ಬಹುಶಃ ನನ್ನ ಅದೃಷ್ಟ ಎಂದರೆ ಇದೇ ಇರಬೇಕು ಎಂದು ಮನಸ್ಸಿನಲ್ಲಿಯೇ ಅಂದು ಕೊಂಡನು.
ಅನಂತಯ್ಯನವರಿಗೆ ಮನೆ ಬೇಕಾದಷ್ಟು ಆಸ್ತಿ ಎಲ್ಲವೂ ಇತ್ತು.ಇದೆಲ್ಲವನ್ನುತನ್ನ ಜವ್ವನದ ಕಠಿಣ ದುಡಿಮೆಯಿಂದಲೇ ಸಂಪಾದಿಸಿದ್ದು ಎಂದು ಅವರ ಮಾತಿನಲ್ಲಿಯೇ ಕೇಳಿಸಿಕೊಂಡಿದ್ದನು.ಆದರೆ ಈಗ ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ.ಹೆಂಡತಿಗೂ ವಯಸ್ಸಾಗಿದೆ,ಆದರೆ ಮಕ್ಕಳು ಯಾರೂ ಇಲ್ಲವೆಂದಲ್ಲ. ಒಂದು ಹೆಣ್ಣು ಹಾಗೂ ಒಬ್ಬ ಗಂಡು ಮಗು. ಹೆಣ್ಣು ಮಗಳನ್ನು ಶ್ರೀಮಂತ ಮನೆತನಕ್ಕೆ ಮದುವೆ ಮಾಡಿಕೊಟ್ಟ ಮೇಲೆ ಆಕೆಗೆ ತವರಿನ ನೆನಪಾಗುತ್ತಿದ್ದುದು ಅಪರೂಪ.ಅವಳ ಸಂಸಾರವೇ ಅವಳ ಸರ್ವಸ್ವವಾಗಿ ಹೋಯಿತು ಎಂದು ಅನಂತಯ್ಯನವರು ಮನುವಿನ ಬಳಿ ಒಮ್ಮೆ ಭಾರವಾದ ಹೃದಯದಿಂದಲೇ ಹೇಳಿದ್ದರು.ಇನ್ನು ತಮ್ಮ ಕೊನೆಗಾಲಕ್ಕೆ ಚಿತೆಗೆ ಕೊಳ್ಳಿಯಿಡಲು ಒಬ್ಬನೇ ಸಾಕು ಎಂದು ಮಗನನ್ನು ಬಹಳ ಮುದ್ದಿನಿಂದಲೇ ಸಾಕಿದ್ದೆವು.ಆತ ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಸೇರಿ ಹೆಸರುಗಳಿಸಬೇಕೆಂದು ಕೊಂಡಿದ್ದೆವು.ಆದರೆ ಆತನ ದಾರಿಯೇ ಬೇರೆ,ಓದಿ ಕೆಲಸಕ್ಕೆಂದು ವಿದೇಶಕ್ಕೆ ಹೋಗುತ್ತೇನೆ ಎಂದವನು ಪಟ್ಟು ಬಿಡಲಿಲ್ಲ.ಕೊನೆಗೊಂದು ದಿನ ಅವನೂ ಹಾರಿಹೋದ.ರೆಕ್ಕೆ ಬಲಿತ ಮೇಲೆ ಯಾರ ಹಂಗೇನು?ಆದರೂ ಅದೊಂದು ದಿನ ಮರಳಿ ಬರುತ್ತಾನೆ ಎನ್ನುವ ಭರವಸೆಯೊಂದಿಗೆ ಬದುಕುತ್ತಿದ್ದೇವೆ ಎಂದು ಆಳವಾದ ನಿಟ್ಟುಸಿರು ಚೆಲ್ಲಿ ಹೇಳಿದ್ದರು.ಇದನ್ನೆಲ್ಲಾ ಕೇಳಿ ,ಈ ಸಂಪತ್ತು ಐಶ್ವರ್ಯವೆಂದರೆ ಹೀಗೇ.. ಇದ್ದರೂ ಅನುಭವಿಸುವ ಯೋಗವಿರುವುದಿಲ್ಲ,ಅಗತ್ಯವಿರುವವರಿಗೆ ದಕ್ಕುವುದಿಲ್ಲ.ಅದಕ್ಕೂ ಒಂದು ಅದೃಷ್ಟವಿರಬೇಕು ಮನಸ್ಸಿನಲ್ಲಿಯೇ ಅಂದುಕೊಂಡಿದ್ದನು.
ಈಗ ಮನುವಿನ ಮನೆಯ ಪರಿಸ್ಥಿತಿ ಕೊಂಚ ಸುಧಾರಿಸತೊಡಗಿತ್ತು. ನೀಲಕ್ಕನಿಗೂ ವಯಸ್ಸಾಗತೊಡಗಿತ್ತು. ಇಷ್ಟರವರೆಗೆ ಕಷ್ಟದಲ್ಲಿ ಬೆಂದು ಹೊದ ಜೀವ ಆಕೆ ಇನ್ನೆಷ್ಟು ದಿನ ಜೀವ ತೇದಾಳು? ಜತೆಯಲ್ಲಿ ತಂಗಿಯ ಓದಿನ ಜವಾಬ್ಧಾರಿಯನ್ನು ಮನು ನಿಭಾಯಿಸುತ್ತಿದ್ದ.ಅದರಲ್ಲೂ ಇನ್ನೂ ಹೆಚ್ಚಿನ ದಿನ ಇಲ್ಲಿದ್ದರೂ ಭವಿಷ್ಯವಿಲ್ಲ,ಎಷ್ಟು ದಿನ ಹೀಗೆ ಬೇರೆಯವರ ಚಾಕರಿ ಮಾಡಿ ಬದುಕಲು ಸಾಧ್ಯ?ಬೇರೇನಾದರೂ ಕೆಲಸ ಹುಡುಕಬೇಕೆಂದುಕೊಂಡಿದ್ದನಾದರೂ ಈ ಮನೆ ಹಿರಿಯರ ಪ್ರೀತಿ ಅವನನ್ನು ಕಟ್ಟಿ ಹಾಕಿತ್ತು.ಇಷ್ಟರವರೆಗೆ ತನಗೆ ಬದುಕು ಕೊಟ್ಟು ಸಹಾಯ ಮಾಡಿದ ಅವರನ್ನು ಬಿಟ್ಟು ಹೋಗಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ.ಅವನೂ ಆ ಮನೆಯವನಾಗಿ ಬಿಟ್ಟಿದ್ದ.
ಆದರೂ ಅನಂತಯ್ಯನವರ ಬಳಿ ಕೆಲಸ ಬಿಡುವ ವಿಚಾರ ಹೇಳಬೇಕೆಂದು ಆ ದಿನ ಅವರ ಬಳಿಗೆ ಹೋಗಿದ್ದ.ಇಷ್ಟು ದಿನ ಲವಲವಿಕೆಯಿಂದ ಇರುತ್ತಿದ್ದ ಅವರು ಕಳೆಗುಂದಿದ್ದರು,ಕನ್ನಡಕದೊಳಗಿಂದ ಕಣ್ಣಂಚು ಒದ್ದೆಯಾಗಿತ್ತು"ಸಾರ್ ಏನು ವಿಷಯ?ಯಾಕೆ ಹೀಗಿದ್ದೀರಾ,ಆರೋಗ್ಯ ಸರಿ ಇಲ್ವಾ?ಡಾಕ್ಟರ್ ಬಳಿ ಹೋಗಿ ಬಂದರಾಯ್ತು ನಡೀರಿ ಹೋಗೋಣ"ಎಂದು ಕೈ ಹಿಡಿದು ಮೇಲೆತ್ತಿದ. ಆಗ ಅನಂತಯ್ಯನವರು ಬೇಸರದಿಂದಲೇ ನಿನ್ನಲ್ಲಿ ಹೇಳದಿದ್ದರೆ ಏನು ಪ್ರಯೋಜನ ಹೇಳು?ನನ್ನ ಮಗ ಇವತ್ತು ಫೋನ್ ಮಾಡಿದ್ದ,"ಅಪ್ಪಾ ನಾನು ಇಲ್ಲಿಯೇ ಅಮೇರಿಕಾದ ಹುಡುಗಿಯನ್ನೇ ಮದುವೆಯಾಗಬೇಕೆಂದು ಕೊಂಡಿದ್ದೇನೆ.ನಾವಿಬ್ಬರೂ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದೇವೆ.ನಿಮ್ಮಿಬ್ಬರ ಆಶೀರ್ವಾದ ಇರಲಿ.ನಿಮಗೆ ಹಣದ ಅವಶ್ಯಕತೆಯೇನಾದರೂ ಇದ್ದಲ್ಲಿ ಕಳುಹಿಸುತ್ತೇನೆ" ಎಂದು ಸುಲಭವಾಗಿ ಹೇಳೀಬಿಟ್ಟ.ಇವರು ನಮ್ಮನ್ನು ಅರ್ಥಮಾಡಿಕೊಂಡಿದ್ದು ಇಷ್ಟೇನಾ ಹೇಳು?ಕೊನೆಗಾಲಕ್ಕೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ,ತಮಗೆ ಆಸರೆಯಾಗುತ್ತಾರೆ,ಇದೆಲ್ಲಾ ಒಂದು ಭ್ರಮೆ.ನಮ್ಮ ಬದುಕಿನಲ್ಲಿ ಯಾರಿಂದಲೂ ಏನನ್ನೂ ನಿರೀಕ್ಷಿಸಬಾರದು ಎಂಬುದು ಎಷ್ಟು ಸತ್ಯ ನೋಡು!ಎಲ್ಲಾ ಅವರವರ ಹಣೆಬರಹ ಎಂದು ಕಣ್ಣೀರೊರೆಸಿಕೊಂಡರು.
ಇದಾಗಿ ಸುಮಾರು ಎರಡು ಎರಡು ವಾರಗಳು ಕಳೆದಿರುವಾಗ ಅನಂತಯ್ಯನವರ ಹೆಂಡತಿ ಕಾಯಿಲೆಯಿಂದ ಹಾಸಿಗೆ ಹಿಡಿದು ಬಿಟ್ಟರು.ಅವರ ಎಲ್ಲಾ ಚಾಕರಿಯ ಜವಾಬ್ಧಾರಿ ಮನುವಿನ ಮೇಲೆ ಬಿತ್ತು.ತನ್ನ ಸ್ವಂತ ತಾಯಿಯಂತೆಯೇ ನೋಡಿಕೊಂಡನು.ವಯಸ್ಸಾದ ಜೀವ ಅದೊಂದು ದಿನ ಕಾಯಿಲೆ ಉಲ್ಬಣವಾಗಿ ಇನ್ನಿಲ್ಲವಾಗಿ ಬಿಟ್ಟರು.ಅನಂತಯ್ಯನವರೂ ದುಃಖದಿದ ಕುಸಿದು ಹೋಗಿದ್ದರು.ಈವರೆಗೆ ತನ್ನ ಜೊತೆಯಲ್ಲಿ ಸಾಗುತ್ತಿದ್ದ ಬದುಕ ಬಂಡಿಯ ಒಂದು ಚಕ್ರ ಕಳಚಿ ಬಿದ್ದಂತಾದ ಅವರು ಈ ಗುಂಗಿನಲ್ಲಿಯೇ ದಿನ ಕಳೆಯತೊಡಗಿದರು.
ಆ ದಿನ ಮನು ಎಂದಿನಂತೆ ಬೆಳಗ್ಗಿನ ಚಹಾ ಕೊಡಲೆಂದು ಅನಂತಯ್ಯನವರ ಕೋಣೆಯ ಬಾಗಿಲ ಬಳಿ ಹೋದಾಗ ಅದು ತೆರೆದೇ ಇತ್ತು.ನೋಡಿದರೆ ಅವರ ಸುಳಿವೇ ಇರಲಿಲ್ಲ.ಬದಲಾಗಿ ಹಾಸಿಗೆಯ ಮೇಲೊಂದು ಪತ್ರವಿತ್ತು ಅಷ್ಟೇ!ಅದರಲ್ಲಿ"ಪ್ರೀತಿಯ ಮನು..ನನಗೆ ಈ ಮನೆ, ಸಂಸಾರ ,ಬದುಕಿನ ಜಂಜಾಟ ಸಾಕಾಗಿ ಹೋಗಿದೆ.ಈ ನನ್ನ ಮನಸ್ಸಿಗೆ ಬೇಕಾದುದು ಶಾಂತಿ ನೆಮ್ಮದಿ.ಅದು ಈ ಲೌಕಿಕ ಬದುಕಿನಲ್ಲಿ ಸಾಧ್ಯವಿಲ್ಲ.ಇಷ್ಟರವರೆಗೆ ದುಡಿದಿದ್ದು,ಗಳಿಸಿದ್ದು ಆಯಿತು.ಇನ್ನು ನೆಮ್ಮದಿಯ ಸೆಲೆ ಹುಡುಕುತ್ತಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿ ನನ್ನ ಮುಂದಿನ ಜೀವನ ಕಳೆಯಬೇಕೆಂದು ಕೊಂಡಿದ್ದೇನೆ.ನಮ್ಮ ಮಕ್ಕಳನ್ನಾದರೂ ಕೊನೆಗಾಲಕ್ಕೆ ನೋಡುವ ಬಾಗ್ಯ ನಮಗಿಲ್ಲ.ಆ ಕೊರತೆಯನ್ನು ನೀನು ನೀಗಿಸಿದೆ.ನಿನ್ನ ಸೇವೆಗೆ ನಾನು ಕೃತಜ್ಙನಾಗಿದ್ದೇನೆ.ನನ್ನ ಈ ಮನೆ ಆಸ್ತಿಯೆಲ್ಲವೂ ಇನ್ನು ಮುಂದೆ ನಿನ್ನದೇ.ಎಲ್ಲವನ್ನೂ ನಿನ್ನ ಹೆಸರಿಗೆ ಬರೆದಿಟ್ಟಿದ್ದೇನೆ.ನಿನಗೆ ಒಳ್ಳೆಯದಾಗಲಿ.."ಓದಿ ಮುಗಿಸುತ್ತಿದ್ದಂತೆಯೇ ಕಣ್ಣೀರಿನ ಹನಿ ಅವನಿಗರಿವಿಲ್ಲದಂತೆಯೇ ಇಳಿಯತೊಡಗಿತ್ತು.ಅನಂತಯ್ಯನವರ ವಿಶಾಲ ಮನಸ್ಸಿನ ಮುಂದೆ ಅವನು ಕುಬ್ಜನಾಗಿ ಹೋಗಿದ್ದ.ಹೊಸ ಜವಾಬ್ದಾರಿಯೊಂದಿಗೆ ಆ ದಿನ ಬೆಳಗಾಗಿತ್ತು.ಅದರೊಂದಿಗೆ ಮನುವಿನ ಬಾಳಲ್ಲೂ ಬೆಳಕು ಮೂಡಿತ್ತು.
"ಮನು ನೀನು ಅದೃಷ್ಟದ ಹುಡುಗನಂತೆ......"ಅಮ್ಮ ಅಂದು ಹೇಳಿದ್ದ ಮಾತುಗಳು ಮತ್ತೆ ಮತ್ತೆ ಮನಪಟಲದಲ್ಲಿ ಮೂಡತೊಡಗಿದ್ದವು.ಮನೆಯ ನೆನಪಾಗಿ ಅಮ್ಮನಿಗೆ ಕೂಡಲೇ ಫೋನಾಯಿಸಿದ.ಮನೆಯ ಫೋನ್ ಟ್ರಿಣ್ ಟ್ರಿಣ್ ರಿಂಗಣಿಸುತ್ತಿತ್ತು.ಮನದಲ್ಲಿ ನೆಮ್ಮದಿಯ ಉಸಿರಿತ್ತು..

ಶುಕ್ರವಾರ, ಡಿಸೆಂಬರ್ 31, 2010

ಒಂಟಿ ಪಯಣ...

ಈ ಕಲ್ಲು ಮುಳ್ಳಿನ ದಾರಿಯಲ್ಲಿ
ಎಡವಿ ಕೊಡವಿ ನಡೆವ ವೇಳೆ
ಕೈ ಹಿಡಿವವರಿಲ್ಲದೆ ನಡೆದ
ದೂರವದು ಎಷ್ಟೋ...

ಬಗೆ ಬಗೆ ಕನಸಿನ ಗುಂಗಲಿ
ಮೈಮರೆತಾಗ ಸುಮ್ಮನೆ ಕಳೆದ
ಕ್ಷಣಗಳು ಕಾಡಿದ ನೆನಪದು ಒಂದಿಷ್ಟು..

ದಾರಿಯ ತುಂಬಾ ಕಣ್ಣಿಗೆ ಕಂಡ
ಬಣ್ಣದ ಹೂಗಳು ನೂರಾರು..
ಪಾಲಿಗೆ ಬರದೆ ಯಾರದೋ
ಮುಡಿಯೇರಿದ ಮೇಲೆ ನನ್ನೆದೆ
ಒಡೆದ ಕನ್ನಡಿ ಚೂರು..

ರಣಬಿಸಿಲಿನ ಬೇಗೆಗೆ ಬಾಯಾರಿದೆ
ಗಂಟಿಕ್ಕಿದೆ ದಾಹದಿ ಕೊರಳು
ಹುಡುಕಾಡಿದೆ ಜೀವ ತಣ್ಣನೆ ನೆರಳು

ದೂರದ ಗುರಿ ಸೇರುವ ತವಕದಿ
ಸಂಜೆಯಾಗುತಿದೆ ಈಗ..
ಒಂಟಿಯಾನವು ನನ್ನದು
ಜೊತೆಯಿರದ ಬದುಕ ತುಂಬಿದೆ
ಬರಿಯ ಮೌನ ರಾಗ ...

ಗುರುವಾರ, ಡಿಸೆಂಬರ್ 30, 2010

ಕೆಲವು ಹನಿಗಳು..

ಗೆಳತಿ ನೀನೆಂದರೆ ಯಾಕೋ
ಮೂಡಿದೆ ಕನಸು,ಕೂಡಿದೆ ಮನಸು
ಬೇರೆ ನಾ ಹೇಳುವುದೇನು..?
ಅರೆಕ್ಷಣ ಕೂಡಾ ನೀ ನೊಂದರೆ ಸಾಕು
ಕರಗುವ ಹೃದಯ,ಮರುಗುವ ಜೀವ
ಆ ನೋವಲ್ಲಿಯೇ ಬದುಕುವೆ ನಾನು !

...................

ಮಳೆಹನಿಯೊಂದು ಉರುಳಿ
ಕಡಲಾಳ ಸೇರಿ
ಆಗುವುದು ಸ್ವಾತಿಮುತ್ತು
ಕಣ್ಣೋಟವೊಂದು ಹೊಳೆದು
ಹೃದಯಗಳೆರಡು ಸೇರಿ
ಪ್ರೀತಿಯಾಗಿ ಬೆಳೆವ ಪರಿ
ಯಾರಿಗೇನು ಗೊತ್ತು..!

..................

ಅಗಣಿತ ತಾರೆಗಳಿದ್ದರೂ ಕೂಡಾ
ಬಾನಿಗೆ ಆ ಚಂದಿರನೊಬ್ಬನೇ ಸಾಕು
ಸಾವಿರ ಹುಡುಗಿಯರಿದ್ದರೂ ಎದುರಲಿ
ನನ್ನೀ ಬದುಕಿಗೆ ನೀನೊಬ್ಬಳೇ ಬೇಕು

...................

ನೀನಂದು ಸಿಕ್ಕಿದ್ದು,ಆಗ ನಕ್ಕಿದ್ದು
ಆಮೇಲೆ ಪ್ರೀತಿ ಉಕ್ಕಿದ್ದು
ಕೇವಲ ನಪ ಮಾತ್ರ..
ಹಾಗೆಯೇ ಕೊನೆಗೆ ದಕ್ಕಿದ್ದು
ನಿನ್ನ ನೆನಪು ಮಾತ್ರ..!